ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದಲ್ಲಿ 105ನೇ ಘಟಿಕೋತ್ಸವ ಇಂದು ನಡೆದಿದ್ದು, ಪದವಿ ಪ್ರದಾನ ಮಾಡಬೇಕಿದ್ದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಗೈರು ಹಾಜರಾಗಿದ್ದಾರೆ.
ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಇಂದು(ಜನವರಿ.18) 105ನೇ ಘಟಿಕೋತ್ಸವವನ್ನು ಆಯೋಜಿಸಲಾಗಿತ್ತು. ಈ ಘಟಿಕೋತ್ಸವದಲ್ಲಿ ಸುಮಾರು 31,689 ವಿದ್ಯಾರ್ಥಿಗಳಿಗೆ ವಿವಿಧ ಪದವಿಗಳನ್ನು ಪ್ರದಾನ ಮಾಡಲಾಗುವುದು ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ತಿಳಿಸಿದ್ದರು. ಆದರೆ ಈ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಬೇಕಿದ್ದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಗೈರು ಹಾಜರಾಗಿದ್ದಾರೆ.
ಈ ಘಟಿಕೊತ್ಸವದಲ್ಲಿ ಮಾಜಿ ಸಂಸದ ಎ.ಸಿ.ಷಣ್ಮೂಗಂ ಮತ್ತು ಶಾಹೀನ್ ಮಜೀದ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು. ಇನ್ನೂ ರಾಜ್ಯಸಭಾ ಸದಸ್ಯರಾದ ಸುಧಾ ಮೂರ್ತಿ ಅವರಿಗೆ 2020ರಲ್ಲಿ ಘೋಷಣೆಯಾಗಿದ್ದ ಗೌರವ ಡಾಕ್ಟರೇಟ್ ಪದವಿಯನ್ನು ಇಂದು ನಡೆದ ಘಟಿಕೋತ್ಸವದಲ್ಲಿ ಸ್ವೀಕರಿಸಿದ್ದಾರೆ. ಜೊತೆಗೆ ಗೌರವ ಡಾಕ್ಟರೇಟ್‌ಗೆ ಆಯ್ಕೆಯಾಗಿದ್ದ ಸಾರಿಗೆ ಎಂಜಿನಿಯರ್ ಬಾಬು ಕೆ.ವಿರೇಗೌಡ ಅವರು ಗೈರಾಗಿದ್ದರು.
ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ಈ ಬಾರಿಯ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಿದ್ದು, ನವದೆಹಲಿಯ ಎಐಐಎಂಎಸ್‌ನ ಸಂಶೋಧಕ ಪ್ರಾಧ್ಯಾಪಕ ಟಿ.ಸಿ.ಸಿಂಗ್ ಅವರು ಘಟಿಕೋತ್ಸವದ ಭಾಷಣ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಹಾಗೂ ಕುಲಸಚಿವರಾದ ಪ್ರೊ.ಎನ್.ನಾಗರಾಜ್ ಮತ್ತು ವಿ.ಆರ್.ಶೈಲಜಾ ಉಪಸ್ಥಿತರಿದ್ದರು.