ಮೈಸೂರು: ಸಚಿವ ಜಮೀರ್ ಅಹಮ್ಮದ್ ಖಾನ್ ರಾಜೀನಾಮೆ ಪಡೆಯುವ ಧೈರ್ಯ ಸಿಎಂ ಸಿದ್ದರಾಮಯ್ಯಗೆ ಇಲ್ಲ. ಹಾಗಾಗಿ ಜಮೀರ್ ಅಹಮ್ಮದ್ ಖಾನ್‌ರನ್ನೇ ಸಿಎಂ ಮಾಡಲಿ ಎಂದು ಮಾಜಿ ಸಚಿವ ಎನ್.ಮಹೇಶ್ ವ್ಯಂಗ್ಯವಾಡಿದ್ದಾರೆ.
ವಸತಿ ಇಲಾಖೆಯಲ್ಲಿನ ಅಕ್ರಮ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಸರ್ಕಾರ ಹಗರಣದ ಸರಮಾಲೆಯನ್ನೇ ಇಟ್ಟುಕೊಂಡಿದೆ. ಹೀಗಾಗಿ ಇದು ಅರೆಬೆಂದ ಸರ್ಕಾರ ಆಗಿದೆ. ಈಗ ಮತ್ತೊಂದು ಹಗರಣ ಸರ್ಕಾರದ ಮೇಲೆ ಬಂದಿದೆ. ಸರ್ಕಾರಕ್ಕೆ ಗೌರವ ಇದ್ದರೆ ವಸತಿ ಸಚಿವರ ರಾಜೀನಾಮೆ ಪಡೆಯಲಿ. ನಾಗೇಂದ್ರರ ರಾಜೀನಾಮೆ ಪಡೆದ ಹಾಗೆ ಜಮೀರ್ ರಾಜೀನಾಮೆ ಪಡೆಯಬೇಕು. ಈ ಸರ್ಕಾರ 100% ಭ್ರಷ್ಟಾಚಾರ ಸರ್ಕಾರ. ಈ ಸರ್ಕಾರದಲ್ಲಿ ಅಭಿವೃದ್ಧಿ ಏನು ಇಲ್ಲ.
ಕೇವಲ ಗ್ಯಾರಂಟಿ ಯೋಜನೆಗಳ ಜಾರಿ ಒಂದೇ ಗರಿಮೆ. ಗ್ಯಾರಂಟಿ ಯೋಜನೆಗಳ ಜಾರಿಯಿಂದ ಮುಂದೆಯೂ ಅಧಿಕಾರ ಸಿಗುತ್ತೆ ಎಂಬ ಭ್ರಮೆಯಲ್ಲಿದ್ದಾರೆ. ಈ ಎಲ್ಲಾ ಹಗರಣಗಳು ಸರ್ಕಾರಕ್ಕೆ ಹುರುಳಾಗುತ್ತದೆ. ಹೈಕಮಾಂಡ್‌ಗೆ ರಾಜ್ಯ ಸರ್ಕಾರವೇ ಎಟಿಎಂ ಆಗಿದೆ. ಬಿಹಾರ, ಯುಪಿ ರಾಜ್ಯಗಳ ಚುನಾವಣೆಗೆ ಹಣ ಬೇಕಾಗಿದ್ದು, ಈ ಕಾರಣಕ್ಕೆ ಸರ್ಕಾರವನ್ನು ಪ್ರಶ್ನೆ ಮಾಡುತ್ತಿಲ್ಲ. ಜಮೀರ್ ಅಹ್ಮದ್ ಖಾನ್ ರಾಜೀನಾಮೆ ಪಡೆಯೋ ಧೈರ್ಯ ಸಿಎಂಗಿಲ್ಲ ಅಂದ್ರೆ ಅವ್ರನ್ನೆ ಸಿಎಂ ಮಾಡಲಿ. ಬಿ.ಆರ್.ಪಾಟೀಲ್ ಸಮಾಜವಾದಿ ಹಿನ್ನೆಲೆಯುಳ್ಳ ಹಾಗೂ ಕಾಂಗ್ರೆಸ್‌ನ ಹಿರಿಯ ಶಾಸಕ. ಸಿಎಂ, ಡಿಸಿಎಂ ಯಾರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಬಹುತೇಕ ಕಾಂಗ್ರೆಸ್ ಹಿರಿಯ ಶಾಸಕರು ಈ ಸರ್ಕಾರದ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಈ ಸರ್ಕಾರ ಯಾವಾಗ ಕುಸಿದು ಬೀಳುತ್ತೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಇನ್ನು ಜಾತಿಗಣತಿ ಮರು ಸಮೀಕ್ಷೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಸರ್ಕಾರ ಜನರ ಕಣ್ಣೊರೆಸುವ ಕೆಲಸ ಮಾಡುತ್ತಿದೆ. ಸಿದ್ದರಾಮಯ್ಯ ಪ್ರಬಲ ಸಮುದಾಯಗಳಿಗೆ ಹೆದರಿ ಅಹಿಂದ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರವೇ ಜನಗಣತಿ ಜೊತೆ ಜಾತಿಗಣತಿ ಮಾಡಲು ಮುಂದಾಗಿದೆ. ಕೇಂದ್ರ ಸರ್ಕಾರದ ಜಾತಿಗಣತಿ, ಜನಗಣತಿ ಒಪ್ಪಿಕೊಂಡು ಸುಮ್ಮನಿರಬೇಕು. ಒಳ ಮೀಸಲಾತಿ ಜಾರಿ ಮಾಡಲು ಸರ್ಕಾರಕ್ಕೆ ಇಷ್ಟ ಇಲ್ಲ. ಈ ಕಾರಣಕ್ಕೆ ಒಳ ಮೀಸಲಾತಿ ಸಮೀಕ್ಷೆ ಮಾಡುತ್ತಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.
ಇನ್ನು ಸಿಎಂ ಅಧಿಕಾರ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ನಡುವೆ ಅಧಿಕಾರ ಹಂಚಿಕೆ ಆಗಿದೆ ಎಂದು ಡಿಕೆಶಿ ಬೆಂಬಲಿಗರು ಹೇಳ್ತಿದ್ದಾರೆ. ಅಧಿಕಾರ ಹಂಚಿಕೆ ಆಗುವ ಮುನ್ನವೇ ಈ ಸರ್ಕಾರ ಕುಸಿದು ಹೋಗಬಹುದು ಎಂದು ಭವಿಷ್ಯ ನುಡಿದರು.
ಇದನ್ನು ಓದಿದ್ರಾ?:- ಜಮೀರ್ ವಿರುದ್ಧ ದೂರು ನೀಡಲು ಜೆಡಿಎಸ್ ಸಿದ್ದತೆ





