ಮೈಸೂರು : ಶೋಷಿತರು ಬುದ್ಧನ ತತ್ವಗಳನ್ನು ಅಳವಡಿಸಿಕೊಳ್ಳುವ ಕೆಲಸವಾಗಬೇಕು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಕರೆ ನೀಡಿದರು.
ನಗರದ ಮಹಾರಾಜ ಮೈದಾನದಲ್ಲಿ ಆಯೋಜಿಸಿದ್ದ ಬೌದ್ಧ ಮಹಾ ಸಮ್ಮೇಳನ 2025 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ಹಿಂದೂವಾಗಿ ಹುಟ್ಟಿದ್ದೇನೆ ಆದರೆ ಹಿಂದೂವಾಗಿ ಸಾಯುವುದಿಲ್ಲ ಎಂದು ಹೇಳಿ ಬೌದ್ಧ ಧರ್ಮಕ್ಕೆ ಅಪಾರ ಅನುಯಾಯಿಗಳೊಂದಿಗೆ ಸೇರ್ಪಡೆಯಾದರು. ಶೋಷಿತರು ಬುದ್ಧನ ತತ್ವ ಅಳವಡಿಸಿಕೊಳ್ಳಬೇಕು, ಉಳ್ಳವರಿಗೆ ಬುದ್ಧ ಬೇಕಾಗಿಲ್ಲ ಆದರೆ ನೊಂದಿರುವವರಿಗೆ ಬುದ್ಧ ಬೇಕಾಗಿದ್ದಾನೆ ಎಂದು ಪ್ರತಿಪಾದಿಸಿದರು.
ಇದನ್ನೂ ಓದಿ:-ಜಡ್ಡುಗಟ್ಟಿದ ಸಮಾಜ ಬದಲಾವಣೆಗೆ ಬುದ್ದ, ಅಂಬೇಡ್ಕರ್ ತತ್ವವೇ ಮದ್ದು : ಸಿಎಂ
ಈ ಸಮ್ಮೇಳನ ಇಂದು ಸಮಾಜಕ್ಕೆ ಪ್ರಸ್ತುತ. ಇಡೀ ದೇಶ ಕಾರ್ಯಕ್ರಮ ನೋಡುತ್ತಿದೆ, ನಿನ್ನೆ 1 ಸಾವಿರ ಮಂದಿ ಬೌದ್ಧ ಧರ್ಮಕ್ಕೆ ಸೇರಿದ್ದಾರೆ. ಸರ್ಕಾರಗಳು ನೂರಾರು ಕಾರ್ಯಕ್ರಮ ಕೊಡಬಹುದು. ಆದರೆ ನಮ್ಮ ಮೇಲಿನ ಶೋಷಣೆಯನ್ನು ತಡೆಯಲು ಆಗುತ್ತಿಲ್ಲ ಎಂದು ಬೇಸರಿಸಿದ ಅವರು, ನಾವು ಎತ್ತೆಚ್ಚುಕೊಳ್ಳಬೇಕು. ನಮಗೆ ಸಮಾನತೆ ಗೌರವ ಸಿಗುವ ಕಡೆ ನಾವು ಹೋಗಬೇಕು ಎಂದರು.
ದೇಶದಲ್ಲಿ ಶಾಂತಿ ನೆಲೆಸಬೇಕೆಂದು ಕೂಗು ಎದ್ದಿದೆ. ಪ್ರಸ್ತುತ ಸಂಘರ್ಷ, ಅಶಾಂತಿ ನಡುವೆ ಬುದ್ಧ ಮತ್ತೆ ಎದ್ದು ನಿಲ್ಲುತ್ತಿದ್ದಾನೆ. ಬುದ್ಧನ ಸಿದ್ದಾಂತ ಅನುಸರಿಸಿದರೆ ಈ ದೇಶದ ಪ್ರತಿಯೊಬ್ಬರಿಗೂ ಗೌರವ ಸಿಗುತ್ತದೆ. ಬುದ್ಧನ ತತ್ವಗಳನ್ನು ಅಳವಡಿಸಿಕೊಳ್ಳುವ ಕೆಲಸ ಮಾಡಬೇಕು ಎಂದು ತಿಳಿದರು.





