ಮೈಸೂರು: ಮೈಸೂರಿನ ಅರಮನೆ ಆವರಣದಲ್ಲಿ ಡಿಸೆಂಬರ್.21ರಿಂದ 31ರವರೆಗೆ ಜರುಗಲಿರುವ ಪ್ರತಿಷ್ಠಿತ ಮಾಗಿ ಉತ್ಸವದ ಅಂಗವಾಗಿ ಆಯೋಜಿಸಲಾಗಿರುವ ಫಲಪುಷ್ಪ ಪ್ರದರ್ಶನಕ್ಕೆ ಅಂತಿಮ ಹಂತದ ಸಿದ್ಧತೆಗಳು ಜೋರಾಗಿ ನಡೆಯುತ್ತಿವೆ.
ಪ್ರತಿ ವರ್ಷದಂತೆ ಈ ಬಾರಿ ಕೂಡ ಫಲಪುಷ್ಪ ಪ್ರದರ್ಶನವು ಪ್ರವಾಸಿಗರು ಹಾಗೂ ಮೈಸೂರಿಗರ ಕಣ್ಮನ ಸೆಳೆಯುವ ರೀತಿಯಲ್ಲಿ ರೂಪುಗೊಳ್ಳುತ್ತಿದ್ದು, ಬಗೆ ಬಗೆಯ ಕಲಾತ್ಮಕ ಮಾದರಿಗಳು ಪ್ರದರ್ಶನದಲ್ಲಿ ಗಮನ ಸೆಳೆಯಲಿವೆ. ಹೂಗಳಿಂದ ಸೃಷ್ಟಿಸಲಾಗಿರುವ ವಿಶಿಷ್ಟ ಪ್ರತಿಕೃತಿಗಳನ್ನು ಕಣ್ತುಂಬಿಕೊಳ್ಳಲು ಸಾರ್ವಜನಿಕರು ಕಾತುರದಿಂದ ಕಾಯುತ್ತಿದ್ದಾರೆ.
ಈ ವರ್ಷದ ಫಲಪುಷ್ಪ ಪ್ರದರ್ಶನದಲ್ಲಿ ಶೃಂಗೇರಿ ಶಾರದಾಂಬೆ ದೇಗುಲ, ಸಾಲುಮರದ ತಿಮ್ಮಕ್ಕ, ಮುಮ್ಮಡಿ ಕೃಷ್ಣರಾಜ ಒಡೆಯರ್, ಭಾರತದ ಸಂವಿಧಾನದ ಪೀಠಿಕೆ, ಕಾಳಿಂಗ ಮರ್ದನ ಸೇರಿದಂತೆ ಹಲವು ಐತಿಹಾಸಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಮಹತ್ವ ಹೊಂದಿರುವ ಮಾದರಿಗಳನ್ನು ಹೂಗಳ ಮೂಲಕ ನಿರ್ಮಿಸಲಾಗಿದೆ.
ಇದನ್ನೂ ಓದಿ:-ಖ್ಯಾತ ನಟ ಹಾಗೂ ನಿರ್ದೇಶಕ ಶ್ರೀನಿವಾಸ್ ನಿಧನ
ಪ್ರತಿಕೃತಿಗಳ ತಯಾರಿಕೆಗೆ ಸುಮಾರು 25 ಲಕ್ಷಕ್ಕೂ ಅಧಿಕ ಹೂಗಳನ್ನು ಬಳಸಲಾಗಿದ್ದು, ಹತ್ತು ದಿನಗಳ ಕಾಲ ನಡೆಯಲಿರುವ ಈ ಪ್ರದರ್ಶನವು ಸಾರ್ವಜನಿಕರಿಗೆ ವಿಶಿಷ್ಟ ಅನುಭವ ನೀಡಲಿದೆ.
ಫಲಪುಷ್ಪ ಪ್ರದರ್ಶನದ ಜೊತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದ್ದು, ಮಾಗಿ ಉತ್ಸವಕ್ಕೆ ಹೆಚ್ಚಿನ ರಂಗು ತುಂಬಲಿದೆ.
ಈ ಕುರಿತು ಮಾತನಾಡಿದ ತೋಟಗಾರಿಕೆ ಇಲಾಖೆ ಅಧಿಕಾರಿ ಯೋಗೀಶ್, “ಪ್ರವಾಸಿಗರಿಗೆ ಆಕರ್ಷಕ ಅನುಭವ ನೀಡುವ ಉದ್ದೇಶದಿಂದ ಎಲ್ಲ ಸಿದ್ಧತೆಗಳನ್ನು ಅಂತಿಮ ಹಂತಕ್ಕೆ ತಲುಪಿಸಲಾಗಿದೆ” ಎಂದು ಮಾಹಿತಿ ನೀಡಿದರು.
ಮಾಗಿ ಉತ್ಸವದ ಫಲಪುಷ್ಪ ಪ್ರದರ್ಶನವು ಈ ಬಾರಿ ಕೂಡ ಮೈಸೂರಿನ ಸಾಂಸ್ಕೃತಿಕ ವೈಭವಕ್ಕೆ ಮತ್ತೊಂದು ಮೆರಗು ನೀಡುವ ನಿರೀಕ್ಷೆಯಿದೆ.





