ಮೈಸೂರು: ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಛಾಟಿಸಬೇಕೆಂದು ಆಗ್ರಹಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರರವರಿಗೆ, ಎಸ್‌ಟಿ ಮೋರ್ಚಾ ರಾಜ್ಯ ಕಾರ್ಯಕಾರಿ ಸದಸ್ಯ ಮೈ.ಕಾ.ಪ್ರೇಮ್ ಕುಮಾರ್ ಹಾಗೂ ಬಿಜೆಪಿ ಮುಖಂಡ ಕುಮಾರ್ ಗೌಡ ಎಂಬುವವರು ಮನವಿ ಸಲ್ಲಿಸಿದ್ದಾರೆ.
ಮೈಸೂರಿಗೆ ಇಂದು(ಜನವರಿ.17) ಆಗಮಿಸಿದ್ದ ಬಿ.ವೈ.ವಿಜಯೇಂದ್ರ ಅವರನ್ನು ಭೇಟಿಯಾದ ಇವರಿಬ್ಬರು, ಮಾಜಿ ಸಂಸದ ಪ್ರತಾಪ್ ಸಿಂಹ ಅವರ ಪಕ್ಷ ವಿರೋಧಿ ಚಟುವಟಿಕೆ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ನಾವು ಸುಮಾರು ಮೂವತ್ತು ವರ್ಷಗಳಿಗೂ ಅಧಿಕ ಕಾಲದಿಂದ ನಾವುಗಳು ಹಿಂದೂ ಸಂಘಟನೆ ಸೇರಿದಂತೆ ಭಾರತೀಯ ಜನತಾ ಪಕ್ಷದ ನಿಷ್ಟಾವಂತ ಕಾರ್ಯಕರ್ತರಾಗಿ ಹಾಗೂ ಬ್ಲಾಕ್ ಮಟ್ಟದ, ಜಿಲ್ಲಾ ಮಟ್ಟದ ಮತ್ತು ರಾಜ್ಯ ಮಟ್ಟದ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದು ಸರಿಯಷ್ಟೇ, ಇತ್ತೀಚಿನ ದಿನಗಳಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಅವರಿಂದಾಗಿ ಪಕ್ಷಕ್ಕೆ ಹಾನಿ ಉಂಟಾಗುತ್ತಿದೆ. ಅಲ್ಲದೇ ಪಕ್ಷಕ್ಕೆ ಮುಜುಗರ ಮತ್ತು ತೀವ್ರ ಬೇಸರವನ್ನು ಉಂಟು ಮಾಡಿದೆ ಎಂದರು.
ಇನ್ನೂ ಪ್ರತಾಪ್ ಸಿಂಹ ಅವರು ಸಂಸತ್ ಭವನದ ಒಳಗೆ ಸ್ಮೋಕ್ ಬಾಂಬ್ ದಾಳಿ ನಡೆಸಿದ ಭಯೋತ್ಪಾದಕರಿಗೆ ಯಾವುದೇ ಪೂರ್ವಾಪರ ಪರಿಶೀಲಿಸದೆ ಒಳಗೆ ಪ್ರವೇಶಿಸಲು ಪಾಸ್ ನೀಡಿರುವುದು ದೇಶದ ಭದ್ರತಾ ವ್ಯವಸ್ಥೆಯನ್ನೇ ಅಣಕಿಸಿದೆ. ಅಲ್ಲದೇ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಮತ್ತು ಮಸ್ತ ಕರ್ನಾಟಕದ ಜನತೆ ತಲೆ ಎತ್ತಿ ನಡೆಯಲು ಸಾಧ್ಯವಾಗದಷ್ಟು ಮುಜುಗರವನ್ನು ಸೃಷ್ಟಿಸಿದೆ. ಜೊತೆಗೆ ಆ ಪ್ರಕರಣದ ತನಿಖೆ ಇಂದಿಗೂ ಸಹ ನಡೆಯುತ್ತಿದ್ದು, ಪಾಸ್ ನೀಡಿಕೆಯ ಆರೋಪ ಹೊತ್ತಿರುವ ಪ್ರತಾಪ್ ಸಿಂಹ ಅವರ ತಲೆಯ ಮೇಲೆ ತೂಗುಗತ್ತಿದೆ. ಹೀಗಾಗಿ ಸಂಸತ್ ಭವನದ ದಾಳಿಯ ತನಿಖೆ ಮುಗಿಯುವವರೆಗೂ ಪ್ರತಾಪ ಸಿಂಹ ಅವರಿಗೆ ಪಕ್ಷದ ಯಾವುದೇ ಉನ್ನತ ಹುದ್ದೆ ನೀಡಬಾರದೆಂದು ಒತ್ತಾಯಿಸಿ ಅವರನ್ನು ಉಚ್ಛಾಟಿಸಬೇಕು ಎಂದು ಮನವಿ ಮಾಡಿದರು.