ಮೈಸೂರು: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ನಡೆಯಿಂದ ಜೆಡಿಎಸ್‌ನ 12 ರಿಂದ 13 ಶಾಸಕರು ಬೇಸರಗೊಂಡಿದ್ದಾರೆ. ಹೀಗಾಗಿ ಅವರನ್ನು ಒಗ್ಗೂಡಿಸುವ ಪ್ರಯತ್ನ ಶುರು ಮಾಡಿದ್ದೇನೆ ಎಂದು ಜೆಡಿಎಸ್‌ನ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ ಇಬ್ರಾಹಿಂ ತಿಳಿಸಿದ್ದಾರೆ.
ಮೈಸೂರಿನಲ್ಲಿ ಇಂದು(ನ.25) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಶಾಸಕರ ನೋವು ನಿವಾರಿಸುವ ಜವಾಬ್ದಾರಿ ನನ್ನದಾಗಿದೆ. ನಾನು ಈಗಲೂ ರಾಜ್ಯ ಘಟಕದ ಅಧ್ಯಕ್ಷನಾಗಿರುವುದರಿಂದ ಪಕ್ಷದ ಶಾಸಕರು ಹಾಗೂ ನಾಯಕರನ್ನು ಒಗ್ಗೂಡಿಸುವುದು ನನ್ನ ಕರ್ತವ್ಯವಾಗಿದೆ. ಅಲ್ಲದೇ ಹೀಗಿರುವ ಪಕ್ಷಕ್ಕೆ ಬೆಂಕಿ ಬಿದ್ದಿದ್ದು, ಶಾಸಕರೆಲ್ಲರೂ ತಮ್ಮ-ತಮ್ಮ ಕ್ಷೇತ್ರಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸಬೇಕಿದೆ. ಹಾಗಾಗಿ ಪಕ್ಷದ ಶಾಸಕರೆಲ್ಲರೂ ಒಬ್ಬೋಬ್ಬರಾಗಿ ತಮ್ಮ ಹೇಳಿಕೆಗಳನ್ನು ನೀಡಲು ಪ್ರಾರಂಭಿಸಿದ್ದಾರೆ ಎಂದು ಹೇಳಿದ್ದಾರೆ.
ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಈಗಲಾದರೂ ಎಚ್.ಡಿ.ಕುಮಾರಸ್ವಾಮಿ ಅವರು ಬುದ್ಧಿ ಕಲಿಯಬೇಕಿದ್ದು, ಜೆಡಿಎಸ್ ಪಕ್ಷವನ್ನು ಫ್ಯಾಮಿಲಿ ಕಂಪನಿಯಾಗಿ ಮಾಡುವುದನ್ನು ಬಿಡಬೇಕು. ಆಗ ಮಾತ್ರ ಪಕ್ಷ ಉಳಿಯಲು ಸಾಧ್ಯ ಎಂದು ಸಲಹೆ ನೀಡಿದ್ದಾರೆ.