ಮೈಸೂರು : ನೈಋತ್ಯರೈಲ್ವೆ ಮೈಸೂರು ವಿಭಾಗದ ಡಿಆರ್‌ಎಂ ಮುದಿತ್ ಮಿತ್ತಲ್ ಅವರು ಅಧಿಕಾರಿಗಳೊಂದಿಗೆ ನಗರದ ವಿವಿಧ ರೈಲು ನಿಲ್ದಾಣಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೈಸೂರಿನ ಅಶೋಕಪುರಂ, ಕಡಕೊಳ, ನಂಜನಗೂಡು ಹಾಗೂ ಚಾಮರಾಜನಗರ ರೈಲು ನಿಲ್ದಾಣಗಳಲ್ಲಿ ಪರಿಶೀಲಿಸಿದ ಅವರು, ಪ್ರಗತಿಯಲ್ಲಿರುವ ರೈಲ್ವೆ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಸೂಚಿಸಿದರು.
ಚಾಮರಾಜನಗರದಲ್ಲಿ ಅಮೃತ ಭಾರತ್ ಸ್ಟೇಷನ್ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳ ಪ್ರಗತಿಯನ್ನು ಅವಲೋಕಿಸಿ, ಪ್ರಯಾಣಿಕರ ಸೌಲಭ್ಯಗಳು, ಮೂಲಸೌಕರ್ಯದ ಸುಧಾರಣೆಗಳು ಮತ್ತು ನಿಲ್ದಾಣ ಪುನರ್ ವಿಕಾಸಕ್ಕೆ ವಿಶೇಷ ಗಮನ ಹರಿಸುವಂತೆ ಹೇಳಿದರು. ಈ ವೇಳೆ ನಿಲ್ದಾಣದಲ್ಲಿನ ಉದ್ಯೋಗಿಗಳು ಮತ್ತು ಸಿಬ್ಬಂದಿಗಳೊಂದಿಗೆ ಸಂವಾದ ನಡೆಸಿದರು.
ಇದನ್ನು ಓದಿ: ಮೈಸೂರು | ಫ್ಯೂಚರ್ ಮಾಡೆಲ್ ಆಫ್ ಇಂಡಿಯಾ ಶೀರ್ಷಿಕೆಯಡಿ ಡಿ.28ರಂದು ಫ್ಯಾಷನ್ ಶೋ
ನಂಜನಗೂಡಿನಲ್ಲಿ ರೈಲ್ವೆ ಗೂಡ್ಸ್ ಶೆಡ್‌ನ ಕಾರ್ಯಾಚರಣೆ, ದಕ್ಷತೆ ಹಾಗೂ ಭವಿಷ್ಯದ ಸಾಮರ್ಥ್ಯ ವೃದ್ಧಿ ಅಗತ್ಯಗಳನ್ನು ಅವಲೋಕಿಸಿದರು. ನಂತರ ಕಡಕೊಳ ರೈಲು ನಿಲ್ದಾಣಕ್ಕೆ ಭೇಟಿ ನೀಡಿ, ಕಂಟೇನರ್ ಲೋಡಿಂಗ್ ಪಾಯಿಂಟ್ ಕಾರ್ಯಕ್ಷಮತೆ, ಸರಕು ಹಸ್ತಾಂತರ ಸೌಲಭ್ಯಗಳು ಹಾಗೂ ಸರಕು ಸಾಗಣೆ ಕಾರ್ಯಕ್ಷಮತೆ ಬಗ್ಗೆ ಮಾಹಿತಿ ಪಡೆದು, ಅಗತ್ಯ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆ ನಡೆಸಿದರು.
ಬಳಿಕ ಮೈಸೂರಿನ ಅಶೋಕಪುರಂ ರೈಲು ನಿಲ್ದಾಣಕ್ಕೆ ಆಗಮಿಸಿ, ಪ್ರಯಾಣಿಕರ ಸೌಲಭ್ಯಗಳು, ಸುರಕ್ಷತಾ ಕ್ರಮಗಳು ಹಾಗೂ ನಿಲ್ದಾಣದ ನಿರ್ವಹಣೆ ಪರಿಶೀಲಿಸಿದರು. ಈ ವೇಳೆ ಗತಿ ಶಕ್ತಿ ಸಿಪಿಎಂ ಆನಂದ್ ಭಾರತಿ ಸೇರಿದಂತೆ ವಿವಿಧ ವಿಭಾಗದ ಅಧಿಕಾರಿಗಳು ಹಾಜರಿದ್ದರು.





