ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಉದ್ಘಾಟಕರ ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ಪ್ರತಿಕ್ರಿಯೆ ನೀಡಿದ್ದು, ಪರೋಕ್ಷವಾಗಿ ಮಾಜಿ ಸಂಸದ ಪ್ರತಾಪ್ ಸಿಂಹಗೆ ಟಾಂಗ್ ಕೊಟ್ಟಿದ್ದಾರೆ.
ಈ ಕುರಿತು ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಂವಿಧಾನ ಪೀಠಿಕೆಯನ್ನು ಟೌನ್ ಮುಂದೆ ಹಾಕಿದ್ದೇವೆ. ಭಾರತದಲ್ಲಿ 130,140 ಕೋಟಿ ಜನ ಇದ್ದಾರೆ. ಅವರಿಗೆ ಮುಕ್ತ ಧಾರ್ಮಿಕ ಆಚರಣೆಗೆ ಅವಕಾಶ ಕೊಟ್ಟಿದ್ದೇವೆ. ಇದರ ಉದ್ದೇಶ ಬಹುತ್ವ ಕಾಪಾಡೋದು. ಗೊಂದಲಕ್ಕೆ ಅನುಮಾನಕ್ಕೆ, ಅಪಮಾನಕ್ಕೆ, ದ್ವೇಷಕ್ಕೆ ಅವಕಾಶ ಇಲ್ಲ ಎಂದು ಸಂವಿಧಾನ ಹೇಳಿದೆ. ಇದನ್ನೇ ಸುಪ್ರೀಂ ಕೋರ್ಟ್ ಹೇಳಿದೆ. ವಿರೋಧಿಗಳಿಗೆ ಸಂವಿಧಾನ ಬೀಗ ಹಾಕಿದೆ ಎಂದು ಪ್ರತಾಪ್ ಸಿಂಹಗೆ ಟಾಂಗ್ ನೀಡಿದರು. ಇನ್ನು ವಿರೋಧಿಗಳಿಗೆ ಇನ್ನು ಮುಂದೆ ಬುದ್ಧಿ ಬರಬೇಕು. ಅತ್ಯಂತ ಪ್ರೀತಿಯಿಂದ ಎಲ್ಲರೂ ದಸರಾ ಆಚರಣೆ ಮಾಡಬೇಕು. ಎಲ್ಲರೂ ಭಾಗಿಯಾಗಿ ಎಂದು ನಾನು ಆಹ್ವಾನ ಕೊಡುತ್ತೇನೆ ಎಂದರು.
ಇನ್ನು ರಾಜ್ಯದಲ್ಲಿ ಜಾತಿಗಣತಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಸ್ವಾತಂತ್ಯಕ್ಕಿಂತ ಮುಂಚೆ ವರ್ಣಾಶ್ರಮ ಮಾಡುತ್ತಿದ್ದರು. ಬಿಜೆಪಿಗೆ ಇದರಲ್ಲಿ ನಂಬಿಕೆ. ಪ್ರತಿ ಪ್ರಜೆಯ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಬದುಕು ಹೇಗಿದೆ ಎಂದು ತಿಳಿದುಕೊಳ್ಳೋದಕ್ಕೆ ನಾವು ಸಮೀಕ್ಷೆ ಮಾಡುತ್ತಿದ್ದೇವೆ. ಇದರಲ್ಲಿ ಬಿಜೆಪಿ ವಿರೋಧ ಮಾಡೋದಕ್ಕೆ ಏನಿದೆ ಎಂದು ಪ್ರಶ್ನೆ ಮಾಡಿದರು. ರಾಜ್ಯದಲ್ಲಿ ಇರುವ ಜಾತಿಗಳನ್ನು ಸಮೀಕ್ಷೆ ಮಾಡುತ್ತಿದ್ದೇವೆ. ನಾವು ಯಾವ ಜಾತಿಯನ್ನು ಹುಟ್ಟು ಹಾಕುತ್ತಿಲ್ಲ. ಹಿಂದೂಗಳನ್ನು ಯಾರು ಟಾರ್ಗೆಟ್ ಮಾಡ್ತಿಲ್ಲ. ಇದು ಬಿಜೆಪಿ ಹೇಳುವ ಅಪ್ಪಟ್ಟ ಸುಳ್ಳು. ಹಿಂದೂ ಧರ್ಮ ಒಡೆಯುವ ಪ್ರಮೇಯ ನಮಗೆ ಇಲ್ಲ. ಅಂಬೇಡ್ಕರ್ ಹೇಳಿದ್ರು ನಾನು ಹಿಂದೂವಾಗಿ ಹುಟ್ಟಿದ್ದೇನೆ.
ಆದ್ರೆ ಹಿಂದೂವಾಗಿ ಸಾಯಲ್ಲ ಅಂತ ಹೇಳಿದ್ದರು. ಹಾಗಾದ್ರೆ ಹಿಂದೂ ಧರ್ಮದಲ್ಲಿ ಏನಿದೆ? ಬಲವಂತವಾಗಿ ಮತಾಂತರ ಮಾಡುವುದು ತಪ್ಪು. ಸಚಿವ ಸಂಪುಟದಲ್ಲಿ ಯಾವ ಒಡಕು ಇರಲಿಲ್ಲ. ಒಮ್ಮತದ ತೀರ್ಮಾನದ ಮೇಲೆ ನೂತನ ಸಮೀಕ್ಷೆ ಮಾಡುತ್ತಿದ್ದೇವೆ. ಲಿಂಗಾಯತ ಒಕ್ಕಲಿಗ ಸಮುದಾಯದವರು ಅವರವರ ವಿಚಾರಕ್ಕೆ ಸಭೆ ಮಾಡುತ್ತಿದ್ದಾರೆ ಎಂದು ಹೇಳಿದರು.





