ಮೈಸೂರು: ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ತಿರುಕನ ಕನಸು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ.
ಈ ಕುರಿತು ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನವರು ಪುಕ್ಕಟೆ ಪ್ರಚಾರಕ್ಕೆ ಇಲ್ಲ ಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ಆರ್‌ಎಸ್ಎಸ್ ಬ್ಯಾನ್ ಮಾಡ್ತೀನಿ ಎಂಬುದು ಕನಸಿನ ಮಾತು. ಇಂಡಿಯಾ- ಚೈನಾ ಗಲಾಟೆ ಆದಾಗ ಆರ್‌ಎಸ್ಎಸ್ ಬೆನ್ನೆಲುಬಾಗಿ ನಿಂತಿತ್ತು. ಪ್ರಿಯಾಂಕಾ ಖರ್ಗೆ ಸೇರಿ ಕಾಂಗ್ರೆಸ್ ನಾಯಕರು ಉದ್ಧಟತನದ ಹೇಳಿಕೆ ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.
ಇನ್ನು ಮೇಕೆದಾಟು ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ಕಾಳಜಿ ಇಲ್ಲ. ಪಕ್ಕದ ತಮಿಳುನಾಡಿನ ಸಿಎಂ ಜೊತೆ ಮಾತನಾಡಿ ಸರಿಪಡಿಸಿ. ಕೇಂದ್ರದಿಂದ ಎಲ್ಲ ಸಹಕಾರ ಕೊಡಿಸುವ ಭರವಸೆಯನ್ನ ಪ್ರಹ್ಲಾದ್ ಜೋಶಿ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ಸರ್ಕಾರ ಜನರ ಪರ ಇಲ್ಲ. ತಮಿಳುನಾಡು ಸರ್ಕಾರವನ್ನು ಈ ಸರ್ಕಾರ ಮನವೊಲಿಸುವ ಕೆಲಸ ಮಾಡಲಿ. ಆಮೇಲೆ ನಾವು ಕೇಂದ್ರದಿಂದ ಸಹಕಾರ ಕೊಡಿಸ್ತೀವಿ ಎಂದರು.
ಇನ್ನು ಮುಂದುವರಿದು ಮಾತನಾಡಿದ ಅವರು, ರಾಜ್ಯದಲ್ಲಿ ಸರ್ಕಾರಿ ನೌಕರರಿಗೆ ಸಂಬಳಕೊಡಲು ಆಗ್ತಿಲ್ಲ. ಗ್ಯಾರಂಟಿ ನಂಬಿಕೊಂಡು ಅಧಿಕಾರಕ್ಕೆ ಬಂದು ಪಶ್ಚಾತ್ತಾಪ ಪಡುತ್ತಿದ್ದಾರೆ. ಕಾಂಗ್ರೆಸ್ ಶಾಸಕರು ಕೂಡ ಕಷ್ಟಪಡುತ್ತಿದ್ದಾರೆ. ರಾಜ್ಯ ಸರ್ಕಾರ ಬದುಕಿದ್ದೂ, ಸತ್ತಂತಾಗಿದೆ. ಸಿಎಂ ಸಿದ್ದರಾಮಯ್ಯ ಅವರಿಗೆ ನಾನು ಸವಾಲು ಹಾಕ್ತೀನಿ. ನೀವು ಎರಡು ವರ್ಷ ಇರಲಿ, ಕಳೆದ ವರ್ಷದ ಅವಧಿಯಲ್ಲಿ ಎಷ್ಟು ಕೋಟಿ ಅನುದಾನ ನೀಡಿದ್ದಾರೆ. ಯಾವುದೇ ಬಿಡಿಗಾಸನ್ನು ಹಳೇ ಮೈಸೂರು ಭಾಗಕ್ಕೆ ನೀಡಿಲ್ಲ ಎಂದು ಕಿಡಿಕಾರಿದರು.
ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನಮ್ಮದು ರಾಷ್ಟ್ರೀಯ ಪಕ್ಷ. ರಾಷ್ಟ್ರದ ನಾಯಕರು ಏನೇ ತೀರ್ಮಾನ ತೆಗೆದುಕೊಂಡರೂ ಬದ್ಧರಾಗಿರಬೇಕಾಗುತ್ತದೆ. ಕಳೆದ ಒಂದೂವರೆ ವರ್ಷದಿಂದ ಉತ್ತಮ ಕೆಲಸ ಮಾಡಿದ ತೃಪ್ತಿ ಇದೆ. ನನ್ನ ಮುಖದ ನಗು ನೋಡಿದರೆ ಏನನಿಸುತ್ತದೆ. ನಾನೇ ಮುಂದುವರಿಯುವ ನಂಬಿಕೆ ಇದೆ. ಆದರೆ ಇದು ಅಂತಿಮವಾಗಿ ರಾಷ್ಟ್ರದ ನಾಯಕರಿಗೆ ಬಿಟ್ಟ ವಿಚಾರ ಎಂದು ಹೇಳಿದರು.