ಮೈಸೂರು: ಕೇಂದ್ರ ತನಿಖಾ ಸಂಸ್ಥೆಗಳು ಇತ್ತೀಚಿನ ವರ್ಷಗಳಲ್ಲಿ ತಮ್ಮ ಸ್ವತಂತ್ರತೆಯನ್ನು ಕಳೆದುಕೊಂಡಿವೆ. ಬಿಜೆಪಿ ತಾಳಕ್ಕೆ ತಕ್ಕಂತೆ ಈ ಸಂಸ್ಥೆಗಳು ಕುಣಿಯುತ್ತಿವೆ ಎಂದು ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಬೇಕು ಎಂದು ಕೇಂದ್ರ ಬಿಜೆಪಿ ಮತ್ತು ರಾಜ್ಯ ಬಿಜೆಪಿಯಿಂದ ಜಾರಿ ನಿರ್ದೇಶನಾಲಯಕ್ಕೆ ಒತ್ತಡ ಇದೆ. ಆದ ಕಾರಣ ದುರುದ್ದೇಶದಿಂದ ಸಿಎಂ ಸಿದ್ದರಾಮಯ್ಯ ಅವರ ಹೆಸರು ಬಳಸುತ್ತಿದ್ದಾರೆ ಎಂದು ಹೇಳಿದರು.
ಮುಡಾ (MUDA)ದವರು ನಮ್ಮ ಜಮೀನು ವಶಪಡಿಸಿಕೊಂಡಿರುವುದಕ್ಕೆ ಪೂರಕವಾಗಿ ನಮಗೆ ಬದಲಿ ನಿವೇಶನ ನೀಡಿದ್ದಾರೆ. ಮುಡಾದಲ್ಲಿ ಆಗಿರುವ ಭ್ರಷ್ಟಾಚಾರಕ್ಕೂ ನಮ್ಮ 14 ನಿವೇಶನಗಳಿಗೂ ಯಾವುದೇ ಸಂಬಂಧವಿಲ್ಲ. ನಮಗೆ ನೀಡಿರುವ ಸೈಟು ಕಾನೂನಾತ್ಮಕವಾಗಿದೆ. ಇದು ಇಡಿಯವರಿಗೂ ಗೊತ್ತು. ಆದರೆ ಸಿದ್ದರಾಮಯ್ಯ ಅವರನ್ನು ಹೇಗಾದರೂ ಆರೋಪಿ ಸ್ಥಾನದಲ್ಲಿ ನಿಲ್ಲಿಸಬೇಕು ಎಂದು ಬಿಜೆಪಿಯಿಂದ ಒತ್ತಡ ಇರುವುದರಿಂದ ತನಿಖಾ ಸಂಸ್ಥೆಗಳು ಈ ರೀತಿ ನಡೆದುಕೊಳ್ಳುತ್ತಿವೆ ಎಂದರು.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಯತೀಂದ್ರ, ಅದು ದೊಡ್ಡ ನಾಯಕರಿಗೆ ಬಿಟ್ಟಿದ್ದು. ಆ ಸ್ಥಾನದ ಬಗ್ಗೆ ಮಾತನಾಡಲು ನಾನು ಇನ್ನು ಚಿಕ್ಕವನು. ಸಿದ್ದರಾಮಯ್ಯ ಅವರೆ ಐದು ವರ್ಷ ಪೂರ್ಣ ಅವಧಿಗೆ ಸಿಎಂ ಆಗಿರುತ್ತಾರೆ. ಹೈಕಮಾಂಡ್ ಮತ್ತು ಅಧ್ಯಕ್ಷರು ಸೇರಿದಂತೆ ಎಲ್ಲರೂ ಸಿದ್ದರಾಮಯ್ಯ ಅವರ ಪರವಾಗಿದ್ದಾರೆ ಎಂದು ತಿಳಿಸಿದರು.