ಮೈಸೂರು: ಸಚಿವ ಸಂಪುಟ ಸಭೆಯನ್ನು ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಸುವ ಬದಲು ಚಾಮರಾಜನಗರದಲ್ಲೇ ನಡೆಸಬೇಕಿತ್ತು ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅಭಿಪ್ರಾಯ ಪಟ್ಟಿದ್ದಾರೆ.
ಈ ಕುರಿತು ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯನವರು ಇತ್ತೀಚಿಗೆ ಹಣೆ ಮೇಲೆ ಕುಂಕುಮ ಇಡೋದು, ದೇವಾಲಯಕ್ಕೆ ಹೋಗೋದು ಜಾಸ್ತಿಯಾಗಿದೆ. ಸಚಿವ ಸಂಪುಟ ಸಭೆಯಲ್ಲಿ ಚಾಮರಾಜನಗರ ಅಭಿವೃದ್ಧಿಗೆ ವಿಶೇಷ ಘೋಷಣೆ ಕೊಡಬೇಕಿತ್ತು. ಈಗಿನ ಘೋಷಣೆ ಕಾರ್ಯಕ್ರಮಗಳು ನಾನು ಶಾಸಕನಾಗಿದ್ದಾಗಲೇ ಮಾಡಿದ್ದು. ಕ್ರೀಡಾಂಗಣ, ಜಿಲ್ಲಾಡಳಿತ ಭವನ, ನವ ಜಿಲ್ಲೆ ನಿರ್ಮಾಣ, ಕಾವೇರಿ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಕ್ರಮ ತಂದಿದ್ದು ನಾನು. ಈಗ ನನ್ನನ್ನೇ ಕಡೆಗಣಿಸಿ ಉದ್ಘಾಟನೆ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಇನ್ನು ಮುಂದುವರಿದು ಮಾತನಾಡಿದ ಅವರು, ಇತ್ತೀಚೆಗೆ ಶಿಕ್ಷಕರು ಮತ್ತು ಪದವೀಧರರು ಮತಹಾಕಲು ಹಣ ಪಡೆಯುತ್ತಿದ್ದಾರೆ. ಇದಕ್ಕೆ ಕಳೆದ ಶಿಕ್ಷಕರ ಮತ್ತು ಪದವೀಧರ ಚುನಾವಣೆಯೇ ಸಾಕ್ಷಿ. ಇದು ಬೇಸರದ ಸಂಗತಿ. ಆ ಚುನಾವಣೆಯಲ್ಲಿ ನಾನೂ ಸ್ಪರ್ಧಿಸಿದ್ದೆ. ಒಂದು ವೋಟಿಗೆ 9 ಸಾವಿರ ಕೊಟ್ಟ ವಿವೇಕಾನಂದ ಶಿಕ್ಷಕರ ವೋಟ್ ಪಡೆದಿದ್ದಾನೆ. ಇವತ್ತಿನ ಪರಿಸ್ಥಿತಿಯಲ್ಲಿ ಒಂದು ಎಂಎಲ್‌ಸಿ ಸ್ಥಾನ ಗೆಲ್ಲಲು ಸುಮಾರು 25 ಕೋಟಿ ಬೇಕು. ಈಗಿನ ವ್ಯವಸ್ಥೆ ಎಲ್ಲಾ ಹಾಳಾಗಿ ಹೋಗಿದೆ ಎಂದು ಬೇಸರ ವ್ಯಕ್ತಪಡಿಸಿದರು.





