ಮೈಸೂರು: ನಾಡ ಅಧಿದೇವತೆ ನೆಲೆಸಿರುವ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭೇಟಿ ನೀಡಿ ತಾಯಿಯ ದರ್ಶನ ಪಡೆದರು.
ಕಳೆದ ಕೆಲ ತಿಂಗಳಿನಿಂದ ರಾಜ್ಯ ಬಿಜೆಪಿಯಲ್ಲಿ ಬಣ ಬಡಿದಾಟ ಜೋರಾಗಿದ್ದು, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಂಡ್ ಟೀಂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.
ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರರನ್ನು ಕೆಳಗಿಳಿಸಲೇಬೇಕು ಎಂದು ಪಟ್ಟು ಹಿಡಿದಿರುವ ಯತ್ನಾಳ್ ಅಂಡ್ ಟೀಂ ಪದೇ ಪದೇ ಹೈಕಮಾಂಡ್ ಭೇಟಿಗೆ ಯತ್ನಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿಂದು ಬೆಂಬಲಿಗರೊಂದಿಗೆ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿದ ಯತ್ನಾಳ್ ಅವರು, ತಾಯಿ ಚಾಮುಂಡೇಶ್ವರಿ ದರ್ಶನ ಪಡೆದರು. ಈ ವೇಳೆ ದೇವಸ್ಥಾನಕ್ಕೆ ಆಗಮಿಸಿದ್ದ ಸಾರ್ವಜನಿಕರು ಯತ್ನಾಳ್‌ರನ್ನು ಕಂಡೊಡನೆ ಜೈ ಬಿಎಸ್‌ವೈ ಹಾಗೂ ಜೈ ವಿಜಯೇಂದ್ರ ಎಂದು ಘೋಷಣೆ ಕೂಗಿದರು. ಈ ವೇಳೆ ಯತ್ನಾಳ್‌ಗೆ ಇರಿಸು ಮುರಿಸು ಉಂಟಾಗಿ ಏನನ್ನೂ ಮಾತನಾಡದೇ ತೆರಳಿದರು.
ಈ ಹಿನ್ನೆಲೆಯಲ್ಲಿ ಶಾಸಕ ಯತ್ನಾಳ್ ಅವರು, ಬಿಜೆಪಿ ಶಿಸ್ತು ಸಮಿತಿಯ ಶೋಕಾಸ್ ನೋಟಿಸ್‌ಗೆ ಹೆದರಿ ಸುಮ್ಮನಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದ್ದು, ಹೈಕಮಾಂಡ್ ಬಿ.ವೈ.ವಿಜಯೇಂದ್ರ ಅವರ ಪರ ಮತ್ತೆ ಒಲವು ತೋರಿದೆ ಎನ್ನಲಾಗುತ್ತಿದೆ.