ಮೈಸೂರು: ಆಷಾಢ ಶುಕ್ರವಾರದ ಪ್ರಯುಕ್ತ ಚಾಮುಂಡಿಬೆಟ್ಟದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಮಾಹಿತಿ ನೀಡಿದ್ದಾರೆ.
ಈ ಕುರಿತು ಚಾಮುಂಡಿಬೆಟ್ಟದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಬಾರಿ ಬೆಟ್ಟದಲ್ಲಿ ಮೂರು ತರದಲ್ಲಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಉಚಿತ ದರ್ಶನ, 300 ರೂ ದರ್ಶನ ಮತ್ತು 2000 ರೂ ದರ್ಶನಕ್ಕೆ ಪ್ರತ್ಯೇಕ ದರ್ಶನ ವ್ಯವಸ್ಥೆ ಮಾಡಲಾಗಿದೆ.
ಲಲಿತ ಮಹಲ್ ಮೈದಾನದಿಂದ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದ್ದು, ಉಚಿತ ದರ್ಶನದ ಭಕ್ತರಿಗೆ ಪ್ರತ್ಯೇಕ ಬಸ್, 300 ರೂ ಟಿಕೆಟ್ ಪಡೆದು ಹೋಗುವರಿಗೆ ಪ್ರತ್ಯೇಕ ಬಸ್ ಮತ್ತು ಎರಡು ಸಾವಿರ ರೂ ಟಿಕೆಟ್ ಪಡೆದು ಹೋಗುವವರಿಗೂ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಮೂರು ವಿಭಾಗ ಮಾಡಿ ದರ್ಶನಕ್ಕೆ ಪ್ರತ್ಯೇಕ ಸರದಿ ಸಾಲನ್ನೂ ಕೂಡ ಮಾಡಲಾಗಿದೆ. ಉಚಿತ ದರ್ಶನಕ್ಕೆ ಬರುವ ಎಲ್ಲಾ ಭಕ್ತಾಧಿಗಳಿಗೂ ಉಚಿತ ಬಸ್ ವ್ಯವಸ್ಥೆ ಇರುತ್ತದೆ.
ಸಿಟಿ ಬಸ್ ನಿಲ್ದಾಣನಿಂದ ಬರುವ ಪುರುಷರು ಟಿಕೆಟ್ ಕೊಟ್ಟು ಬರಬೇಕಾಗುತ್ತದೆ. ಲಲಿತಾ ಮಹಲ್ ಬಳಿಯಿಂದ ಹೋಗುವ ಸಾಮಾನ್ಯ ಭಕ್ತಾಧಿಗಳಿಗೆ ಉಚಿತವಾಗಿರುತ್ತದೆ. ಶುಕ್ರವಾರದಿಂದ ಭಾನುವಾರದವರೆಗೂ 300, 2000ರೂ ಟಿಕೆಟ್ ಕೊಟ್ಟು ಹೋಗುವ ಭಕ್ತಾಧಿಗಳಿಗೆ ಮೂರು ದಿನಗಳೂ ಬಸ್ ಉಚಿತವಾಗಿರುತ್ತದೆ.
ಬೆಟ್ಟಕ್ಕೆ ಬರುವ ಭಕ್ತರಿಗೆ ಡ್ರೈಫ್ರೂಟ್ಸ್ ಮತ್ತು ನಂದಿನ ಬಾದಾಮಿ ಹಾಲನ್ನೂ ಕೊಡುವ ವ್ಯವಸ್ಥೆ ಮಾಡಲಾಗುತ್ತದೆ. ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಭಕ್ತಾಧಿಗಳಿಗೆ ಯಾವುದೇ ತೊಂದರೆ ಆಗದಂತೆ ಸಕಲ ವ್ಯವಸ್ಥೆಯನ್ನು ಮಾಡಲಾಗಿದೆ. 2 ಸಾವಿರ ವಿಶೇಷ ಟಿಕೆಟ್ ಹೊಂದಿರುವ ಭಕ್ತರನ್ನು ಕರೆತರುವ ಬಸ್ಸು ಮಹಿಷಾಸುರ ಪ್ರತಿಮೆವರೆಗೂ ಬರಲಿದೆ ಎಂದು ಮಾಹಿತಿ ನೀಡಿದರು.





