Mysore
24
overcast clouds

Social Media

ಮಂಗಳವಾರ, 24 ಜೂನ್ 2025
Light
Dark

ಸೆಟ್ಟೇರಿತು ಸೂರಿ ಹೊಸ ಸಿನಿಮಾ; ಯುವಗೆ ‘ದುನಿಯಾ’ ವಿಜಯ್‌ ಪುತ್ರಿ ನಾಯಕಿ

yuva rajakumar duniya vijay

ಯುವ ಅಭಿನಯದ ‘ಎಕ್ಕ’ ಚಿತ್ರವು ಜೂನ್‍ 06ರಂದು ಬಿಡುಗಡೆಯಾಗುತ್ತಿದೆ. ಈ ಚಿತ್ರವನ್ನು ಅಶ್ವಿನಿ ಪುನೀತ್‌ ರಾಜಕುಮಾರ್‌ ಅವರ ಪಿಆರ್‌ಕೆ ಪ್ರೊಡಕ್ಷನ್ಸ್, ಕಾರ್ತಿಕ್‌ ಗೌಡ ಹಾಗೂ ಯೋಗಿ ಜಿ ರಾಜ್‌ ಒಡೆತನದ KRG ಸ್ಟುಡಿಯೋಸ್‍ ಹಾಗೂ ಜಯಣ್ಣ-ಭೋಗಣ್ಣ ಅವರ ಜಯಣ್ಣ ಫಿಲ್ಮಂಸ್‌ ಬ್ಯಾನರ್‌ನಡಿ ನಿರ್ಮಿಸಲಾಗುತ್ತಿದೆ. ಈ ಚಿತ್ರ ಬಿಡುಗಡೆಗೂ ಮುನ್ನವೇ ಇದೇ ಸಂಸ್ಥೆಯಡಿ ಹೊಸದೊಂದು ಚಿತ್ರ ಘೋಷಣೆಯಾಗಿದೆ.

ವಿಶೇಷವೆಂದರೆ, ಈ ಚಿತ್ರದಲ್ಲೂ ಯುವ ರಾಜಕುಮಾರ್ ನಟಿಸುತ್ತಿದ್ದು, ‘ದುನಿಯಾ’ ಸೂರಿ ನಿರ್ದೇಶನ ಮಾಡುತ್ತಿದ್ದಾರೆ. ವಿಶೇಷವೆಂದರೆ, ‘ದುನಿಯಾ’ ಚಿತ್ರದ ಮೂಲಕ ವಿಜಯ್‍ ಅವರನ್ನು ಹೀರೋ ಮಾಡಿದ್ದ ಸೂರಿ, ಈ ಚಿತ್ರದಲ್ಲಿ ವಿಜಯ್‍ ಅವರ ಮಗಳು ರಿತನ್ಯಾಳನ್ನು ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ.

ಕೆಲವು ತಿಂಗಳುಗಳ ಹಿಂದೆಯೇ ಯುವ ಹಾಗೂ ಸೂರಿ ಸಿನಿಮಾ ಕುರಿತು ಮಾತು ಕೇಳಿಬರುತ್ತಿತ್ತು. ಆ ಚಿತ್ರ ಅಕ್ಷಯ ತೃತೀಯ ದಿನ ಅಧಿಕೃತವಾಗಿ ಸೆಟ್ಟೇರಿದೆ. ಬುಧವಾರ, ಬೆಂಗಳೂರಿನ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರಳವಾಗಿ ಮುಹೂರ್ತ ನೆರವೇರಿದೆ. ಚಿತ್ರದ ಮೊದಲ ದೃಶ್ಯಕ್ಕೆ ‘ದುನಿಯಾ’ ವಿಜಯ್‍ ಕ್ಲ್ಯಾಪ್‌ ಮಾಡಿದ್ದು, ಪುನೀತ್ ರಾಜಕುಮಾರ್‍ ಅವರ ಮಗಳು ಧೃತಿ ಪುನೀತ್ ರಾಜಮಾರ್ ಕ್ಯಾಮೆರಾ ಚಾಲನೆ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದರು.

ಯುವಗೆ ಇದು ಮೂರನೇ ಚಿತ್ರ. ಕಳೆದ ವರ್ಷ ಬಿಡುಗಡೆಯಾದ ‘ಯುವ’ ಚಿತ್ರದ ಜೊತೆಗೆ ‘ಎಕ್ಕ’ ಮುಗಿಸಿ, ಬಿಡುಗಡೆಗೆ ಕಾಯುತ್ತಿದ್ದಾರೆ. ಇನ್ನು, ರಿತನ್ಯಾಗೆ ಇದು ಎರಡನೇ ಚಿತ್ರ. ಕಳೆದ ವರ್ಷ ಸೆಟ್ಟೇರಿದ ‘ಲ್ಯಾಂಡ್‍ ಲಾರ್ಡ್’ ಚಿತ್ರದಲ್ಲಿ ರಿತನ್ಯಾ ನಟಿಸಿದ್ದು, ಚಿತ್ರದ ಚಿತ್ರೀಕರಣ ಇನ್ನೂ ಮುಗಿದಿಲ್ಲ.

ಇನ್ನೂ ಹೆಸರಿಡದ ಈ ಚಿತ್ರಕ್ಕೆ ದೀಪು ಎಸ್‌. ಕುಮಾರ್‌ ಸಂಕಲನ, ಚರಣ್‌ ರಾಜ್‌ ಸಂಗೀತ ನಿರ್ದೇಶನ, ಶೇಖರ್‌ ಛಾಯಾಗ್ರಹಣವಿರಲಿದೆ. ಮೇ ತಿಂಗಳ ಕೊನೆಯಲ್ಲಿ ಈ ಚಿತ್ರದ ಚಿತ್ರೀಕರಣ ಅಧಿಕೃತವಾಗಿ ಪ್ರಾರಂಭವಾಗಲಿದೆ.

Tags:
error: Content is protected !!