ವಿನೋದ್ ಪ್ರಭಾಕರ್ ಅಭಿನಯದ ‘ಮಾದೇವ’ ಚಿತ್ರವು ಮೇ 30ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿತ್ತು. ಚಿತ್ರವು ಇದೀಗ ಒಂದು ವಾರ ಮುಂದಕ್ಕೆ ಹೋಗಿದ್ದು, ಚಿತ್ರವು ಇದೀಗ ಜೂನ್ 06ರಂದು ಬಿಡುಗಡೆಯಾಗುತ್ತಿದೆ.
ರಾಧಾಕೃಷ್ಣ ಪಿಕ್ಚರ್ಸ್ ಲಾಂಛನದಲ್ಲಿ ಆರ್ ಕೇಶವ (ದೇವಸಂದ್ರ) ನಿರ್ಮಿಸಿರುವ, ನವೀನ್ ರೆಡ್ಡಿ ನಿರ್ದೇಶನದ ‘ಮಾದೇವ’ ಚಿತ್ರದ ಹೊಸ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಇತ್ತೀಚೆಗೆ ಘೋಷಿಸಿದೆ.
ಈ ಸಂದರ್ಭದಲ್ಲಿ ಮತನಾಡಿದ ನಿರ್ದೇಶಕ ನವೀನ್ ರೆಡ್ಡಿ, ‘ಮಾದೇವ’ ಚಿತ್ರ 1980ರ ಕಾಲಘಟ್ಟದಲ್ಲಿ ನಡೆಯುವ ಕಥಾಹಂದರ ಹೊಂದಿರುವ ಚಿತ್ರ. ವಿನೋದ್ ಪ್ರಭಾಕರ್ ಅವರು ಈ ಚಿತ್ರದಲ್ಲಿ ನೇಣಿಗೆ ಹಾಕುವವನ ಪಾತ್ರ ಮಾಡಿದ್ದಾರೆ. ವಿನೋದ್ ಪ್ರಭಾಕರ್ ಅವರಿಗೆ ನಾಯಕಿಯಾಗಿ ಸೋನಾಲ್ ಮೊಂತೆರೊ ಅಭಿನಯಿಸಿದ್ದಾರೆ. ವಿಶೇಷ ಪಾತ್ರದಲ್ಲಿ ಶ್ರೀನಗರ ಕಿಟ್ಟಿ ನಟಿಸಿದ್ದಾರೆ. ಮಾಲಾಶ್ರೀ, ಶೃತಿ, ಅಚ್ಯುತ ಕುಮಾರ್, ಕಾಕ್ರೋಜ್ ಸುಧೀ, ಮೈಕೋ ನಾಗರಾಜ್, ಬಲ ರಾಜ್ವಾಡಿ ಮುಂತಾದವರು ತಾರಾಬಳಗದಲ್ಲಿದ್ದಾರೆ’ ಎಂದರು.
ಕೋವಿಡ್ ಸಮಯದಲ್ಲಿ ವಿನೋದ್‍ಗೆ ನಿರ್ದೇಶಕರು ಕಥೆ ಹೇಳಿದರಂತೆ. ‘ಕಥೆ ಬಹಳ ಇಷ್ಟವಾಯಿತು. ನಿರ್ದೇಶಕರು ಹೇಳಿದ ಹಾಗೆ 80ರ ಕಾಲಘಟ್ಟದ ಕಥೆ. ಹ್ಯಾಂಗ್ ಮ್ಯಾನ್ ಪಾತ್ರದಲ್ಲಿ ನಾನು ಅಭಿನಯಿಸಿದ್ದೇನೆ. ನನಗೆ ತಿಳಿದಿರುವ ಹಾಗೆ ಕನ್ನಡದಲ್ಲಿ ಹ್ಯಾಂಗ್ ಮ್ಯಾನ್ ಕುರಿತಾದ ಕಥೆ ಬಂದಿಲ್ಲ. ನಾನು ಈ ಚಿತ್ರದಲ್ಲಿ ಅಭಿನಯಿಸುವಾಗ ಕೆಲವು ಸನ್ನಿವೇಶಗಳು ನಮ್ಮ ತಂದೆ ಪ್ರಭಾಕರ್ ಅವರ ಅಭಿನಯದ ‘ಜಿದ್ದು’ ಹಾಗೂ ‘ಕರುಳಿನ ಕೂಗು’ ಚಿತ್ರಗಳು ನೆನಪಾದವು. ಚಿತ್ರದಲ್ಲಿ ಮೊದಲು ಮೃಗವಾಗಿರುತ್ತೇನೆ. ನನ್ನ ಜೀವನಕ್ಕೆ ಪಾರ್ವತಿ ಎಂಟ್ರಿ ಕೊಟ್ಟ ನಂತರ ಮನುಷ್ಯನಾಗುತ್ತೇನೆ. ನಂತರ ಕಾರಣಾಂತರಗಳಿಂದ ರಾಕ್ಷಸನಾಗುತ್ತೇನೆ. ಯಾಕೆ, ಏನು ಎಂದು ಗೊತ್ತಾಗಬೇಕಿದ್ದರೆ ಚಿತ್ರ ನೋಡಬೇಕು’ ಎಂದರು.
ಈ ಚಿತ್ರದಲ್ಲಿ ಸೋನಲ್, ಪಾರ್ವತಿ ಎಂಬ ಹಳ್ಳಿಹುಡುಗಿಯ ಪಾತ್ರ ಮಾಡಿದ್ದಾರಂತೆ. ‘ರಾಬರ್ಟ್’ ಚಿತ್ರದ ನಂತರ ತಾನು ಹಾಗೂ ವಿನೋದ್ ಜೊತೆಯಾಗಿ ನಟಿಸಿದ್ದೇವೆ ಎಂದು ಖುಷಿಪಟ್ಟರು. ಪ್ರದ್ಯೋತನ್ ಸಂಗೀತ, ಬಾಲಕೃಷ್ಣ ತೋಟ ಛಾಯಾಗ್ರಹಣ ಈ ಚಿತ್ರಕ್ಕಿದೆ.





