‘ಅಂದೊಂದಿತ್ತು ಕಾಲ’ ಚಿತ್ರದ ‘ಮುಂಗಾರು ಮಳೆಯಲ್ಲಿ…’ ಎಂಬ ಹಾಡು ಕೆಲವು ದಿನಗಳ ಹಿಂದೆ ಬಿಡುಗಡೆಯಾಗಿದೆ ಮೆಚ್ಚುಗೆ ಪಡೆದಿತ್ತು. ಈಗ ಚಿತ್ರದ ಎರಡನೇ ಹಾಡನ್ನು ಬಿಡುಗಡೆ ಮಾಡಲಾಗಿದೆ.
‘ಅರೆರೆ ಯಾರೋ ಇವಳು …’ ಎಂದು ಸಾಗುವ ಈ ಹಾಡಿಗೆ ಅರಸು ಅಂತಾರೆ ಸಾಹಿತ್ಯ ಬರೆದಿದ್ದು, ವಿನಯ್ ರಾಜಕುಮಾರ್ ಹಾಗೂ ನಿಶಾ ಕಾಣಿಸಿಕೊಂಡಿದ್ದಾರೆ. ನಿಹಾಲ್ ತಾರೋ ಧ್ವನಿಯಾಗಿರುವ ಹಾಡಿಗೆ ರಾಘವೇಂದ್ರ ಸಂಗೀತ ಸಂಯೋಜಿಸಿದ್ದಾರೆ. ವಿಶೇಷವೆಂದರೆ, ಈ ಚಿತ್ರದಲ್ಲಿ ವಿನಯ್ ರಾಜಕುಮಾರ್ 16 ವರ್ಷದ ಯುವಕನ ಗೆಟಪ್‍ನಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಚಿತ್ರದ ಕುರಿತು ಮಾತನಾಡಿದ ವಿನಯ್ ರಾಜಕುಮಾರ್, ‘ಇದು ನನ್ನ ಮೆಚ್ಚಿನ ಗೀತೆ. ನಾನು ನಿರ್ದೇಶಕ ಕೀರ್ತಿಗೆ ಇದನ್ನೇ ಮೊದಲು ಬಿಡುಗಡೆ ಮಾಡಿ ಎಂದಿದ್ದೆ. ಈ ಚಿತ್ರದಲ್ಲಿ ನಾನು 16 ವರ್ಷದ ಹುಡುಗನ ಗೆಟಪ್‍ನಲ್ಲಿ ಕಾಣಿಸಿಕೊಂಡಿದ್ದೇನೆ. ಅದು ನಿಜವಾಗಲೂ ಸವಾಲಾಗಿತ್ತು. ಸಾಕಷ್ಟು ತೂಕ ಕಡಿಮೆ ಮಾಡಿಕೊಂಡು ಕಾಣಿಸಿಕೊಂಡಿದ್ದೇನೆ. ಹಾಡು ತುಂಬಾ ಚೆನ್ನಾಗಿ ಬಂದಿದೆ. ಚಿತ್ರದಲ್ಲಿ ಶಾಲಾ ದಿನಗಳಲ್ಲಿ ಇಷ್ಟಪಟ್ಟ ಹುಡುಗಿಯ ಹಿಂದೆ ಓಡಾಡಿದ್ದೇನೆ. ಆದರೆ, ನಿಜ ಜೀವನದಲ್ಲಿ ಹತ್ತನೇ ತರಗತಿ ಓದುವಾಗ ನಾನು ಬಹಳ ಮುಗ್ಧ ಹುಡುಗ. ಈ ಚಿತ್ರದಲ್ಲಿ ನನ್ನ ಪಾತ್ರಕ್ಕೆ ಮೂರು ಶೇಡ್‍ಗಳಿವೆ. ಸಿನಿಮಾ ಎಲ್ಲರಿಗೂ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ’ ಎಂದರು.
ಈ ಹಾಡಿನಲ್ಲಿ ಶಾಲಾ ವಿದ್ಯಾರ್ಥಿಯಾಗಿ ಕಾಣಿಸಿಕೊಂಡಿರುವ ನಿಶಾ ರವಿಕೃಷ್ಣನ್, ‘ಇದರಲ್ಲಿ ನನ್ನದೊಂದು ಸಣ್ಣ ಪಾತ್ರವಾದರೂ ಬಹಳ ಮುಖ್ಯವಾದ ಪಾತ್ರ. ವಿನಯ್ ರಾಜಕುಮಾರ್ ಜೊತೆ ಅಭಿನಯಿಸಿದ್ದು ಖುಷಿ ತಂದಿದೆ’ ಎಂದರು.
ಭುವನ್ ಮ್ಯೂವಿಸ್ ಬ್ಯಾನರ್ ಅಡಿ ಭುವನ್ ಸುರೇಶ್ ನಿರ್ಮಿಸಿರುವ ಈ ಚಿತ್ರದಲ್ಲಿ ವಿನಯ್ ರಾಜ್‍ಕುಮಾರ್ ಮತ್ತು ಅದಿತಿ ಜೊತೆಗೆ ನಿಶಾ ರವಿಕೃಷ್ಣನ್, ಜಗ್ಗಪ್ಪ, ಅರುಣಾ ಬಾಲರಾಜ್ ಮುಂತಾದವರು ನಟಿಸಿದ್ದು, ರವಿಚಂದ್ರನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೀರ್ತಿ ಕೃಷ್ಣ ಕಥೆ, ಚಿತ್ರಕಥೆ ಬರೆಯುವುದರ ಜೊತೆಗೆ ನಿರ್ದೇಶನ ಮಾಡಿದ್ದಾರೆ.





