ಕೊಡಗಿನ ಮೂಲದ ವರ್ಷ ಬೊಳ್ಳಮ್ಮ, ತಮಿಳು, ಮಲಯಾಳಂ ಮತ್ತು ತೆಲುಗು ಭಾಷೆಯ ಹಲವು ಜನಪ್ರಿಯ ಚಿತ್ರಗಳಲ್ಲಿ ನಟಿಸಿದ್ದರು. ಆದರೆ, ಇದುವರೆಗೂ ಕನ್ನಡದಲ್ಲಿ ಮಾತ್ರ ನಟಿಸಿರಲಿಲ್ಲ. ಇದೀಗ, ವಿಜಯ್ ರಾಘವೇಂದ್ರ ಅಭಿನಯದ ‘ಮಹಾನ್’ ಚಿತ್ರದ ಮೂಲಕ ಅವರು ಕನ್ನಡಕ್ಕೆ ಎಂಟ್ರಿ ಕೊಡುತ್ತಿದ್ದಾರೆ.
ಪಿ.ಸಿ. ಶೇಖರ್ ನಿರ್ದೇಶನದ, ಆಕಾಶ್ ಪಿಕ್ಚರ್ಸ್ ಲಾಂಛನದಲ್ಲಿ ಪ್ರಕಾಶ್ ಬುದ್ದೂರು ನಿರ್ಮಿಸುತ್ತಿರುವ ’ಮಹಾನ್’ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸುವ ಮೂಲಕ ದಕ್ಷಿಣ ಭಾರತದ ಜನಪ್ರಿಯ ನಟಿ ವರ್ಷ ಬೊಳ್ಳಮ್ಮ, ಕನ್ನಡಕ್ಕೆ ಎಂಟ್ರಿ ಕೊಡುತ್ತಿದ್ದಾರೆ.ತಮಿಳಿನ ‘ಬಿಗಿಲ್’, ‘96’ ಸೇರಿದಂತೆ ಹಲವು ಚಿತ್ರಗಳಲ್ಲಿ ವರ್ಷ ನಟಿಸಿದ್ದಾರೆ.
ಈ ಚಿತ್ರದಲ್ಲಿ ನಟಿಸುತ್ತಿರುವ ಕುರಿತು ಮಾತನಾಡಿರುವ ವರ್ಷ, ‘ಮೂಲತಃ ಕನ್ನಡದವಳಾದ ನಾನು ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳ ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಈಗ ಇದೇ ಮೊದಲ ಬಾರಿಗೆ ಕನ್ನಡದ ‘ಮಹಾನ್’ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಮಾತೃಭಾಷೆಯ ಚಿತ್ರದಲ್ಲಿ ನಟಿಸುತ್ತಿರುವುದಕ್ಕೆ ಬಹಳ ಖುಷಿಯಾಗುತ್ತಿದೆ. ‘ಮಾಹಾನ್’ ರೈತರ ಕುರಿತಾದ ಚಿತ್ರ. ರೈತರ ಬದುಕಿನ ಬವಣೆಗಳನ್ನು ನಿರ್ದೇಶಕರು ಈ ಚಿತ್ರದಲ್ಲಿ ತೋರಿಸಲು ಹೊರಟಿದ್ದಾರೆ. ಕಥೆ ಕೇಳಿದಾಗ, ಕಥೆಯಲ್ಲಿರುವ ಸಾಮಾಜಿಕ ಕಳಕಳಿ ಬಹಳ ಇಷ್ಟವಾಯಿತು. ನಾನು ವಿಜಯ ರಾಘವೇಂದ್ರ ಅವರ ಅಭಿಮಾನಿ. ಅವರೊಟ್ಟಿಗೆ ಈ ಚಿತ್ರದಲ್ಲಿ ನಟಿಸುತ್ತಿರುವುದಕ್ಕೆ ಬಹಳ ಸಂತೋಷವಾಗಿದೆ’ ಎಂದು ಹೇಳಿದ್ದಾರೆ.
‘ಮಹಾನ್’ ಚಿತ್ರದಲ್ಲಿ ವಿಜಯ್ ರಾಘವೇಂದ್ರ, ರಾಧಿಕಾ ನಾರಾಯಣ್, ಮಿತ್ರ, ನಮ್ರತ ಗೌಡ, ವರ್ಷ ಬೊಳ್ಳಮ್ಮ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.





