ಸದ್ಯ ನಾಗಣ್ಣ ನಿರ್ದೇಶನದ ‘ಭಾರ್ಗವ’ ಚಿತ್ರದಲ್ಲಿ ನಟಿಸುತ್ತಿರುವ ಉಪೇಂದ್ರ, ಸದ್ದಿಲ್ಲದೆ ಇನ್ನೊಂದು ಹೊಸ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಈ ಹಿಂದೆ ‘ಛೂ ಮಂತರ್ʼ ಸೇರಿದಂತೆ ಕೆಲವು ಚಿತ್ರಗಳನ್ನು ನಿರ್ಮಿಸಿರುವ ತರುಣ್ ಶಿವಪ್ಪ ಈ ಚಿತ್ರವನ್ನು ತರುಣ್ ಸ್ಟುಡಿಯೋಸ್ ಮೂಲಕ ನಿರ್ಮಿಸುತ್ತಿದ್ದಾರೆ. ಈ ಚಿತ್ರಕ್ಕೆ ʼನೆಕ್ಸ್ಟ್ ಲೆವೆಲ್ʼ ಎಂಬ ಶೀರ್ಷಿಕೆ ಇಡಲಾಗಿದೆ.
ಇದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಅರವಿಂದ್ ಕೌಶಿಕ್ ನಿರ್ದೇಶನದಲ್ಲಿ ಮೂಡಿಬರುತ್ತಿದೆ. ಸದ್ಯ ಅರವಿಂದ್ ಹೇಳಿರುವ ಕಥೆಯನ್ನು ತರುಣ್ ಒಪ್ಪಿದ್ದು, ಚಿತ್ರೀಕರಣ ಸದ್ಯದಲ್ಲೇ ಶುರುವಾಗಲಿದೆ.
ಕನ್ನಡಕ್ಕೆ ಅನೀಶ್ ತೇಜೇಶ್ವರ್, ರಕ್ಷಿತ್ ಶೆಟ್ಟಿ, ಅರವಿಂದ್ ಅಡಿಗ ಮುಂತಾದ ಹೀರೋಗಳನ್ನು ಪರಿಚಯಿಸಿದವರು ಅರವಿಂದ್ ಕೌಶಿಕ್. 15 ವರ್ಷಗಳ ಹಿಂದೆ ಬಿಡುಗಡೆಯಾದ ‘ನಮ್ ಏರಿಯಾಲ್ ಒಂದಿನ’ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾದ ಅರವಿಂದ್ ಕೌಶಿಕ್, ಆ ನಂತರ ‘ತುಗ್ಲಕ್’, ‘ಹುಲಿರಾಯ’, ‘ಶಾರ್ದೂಲ’ ಮತ್ತು ‘ಅರ್ಧಂಬರ್ಧ ಪ್ರೇಮಕಥೆ’ ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಆದರೆ, ಇದುವರೆಗೂ ದೊಡ್ಡ ಯಶಸ್ಸನ್ನು ನೋಡಿಲ್ಲ. ‘ನೆಕ್ಸ್ಟ್ ಲೆವೆಲ್’ ಚಿತ್ರದ ಮೂಲಕವಾದರೂ ಅವರು ಯಶಸ್ಸು ಕಾಣುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
‘UI’ ಚಿತ್ರದ ನಂತರ ಒಂದಿಷ್ಟು ವಿಶ್ರಾಂತಿ ಪಡೆದ ಉಪೇಂದ್ರ, ಇದೀಗ ಒಂದರ ಹಿಂದೊಂದು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಅವರು ತೆಲುಗಿನ ರಾಮ್ ಪೋತಿನೇನಿ ಅಭಿನಯದ ಹೊಸ ಚಿತ್ರದಲ್ಲಿ ನಟಸುತ್ತಿರುವ ಸುದ್ದಿ ಬಂದಿತ್ತು. ಈ ಮಧ್ಯೆ, ‘ಛೂ ಮಂತರ್’ ನಿರ್ದೇಶಿಸಿದ್ದ ‘ಕರ್ವ’ ನವನೀತ್ ನಿರ್ದೇಶನದ ಹೊಸ ಚಿತ್ರದಲ್ಲಿ ನಟಿಸುತ್ತಿರುವ ಸುದ್ದಿಯೂ ಇದೆ. ಒಟ್ಟಾರೆ ಉಪೇಂದ್ರ ಸದ್ಯ ಕನ್ನಡದಲ್ಲಿ ಬಹಳ ಬ್ಯುಸಿ ನಟರಾಗಿದ್ದು, ಮುಂದಿನ ಎರಡು ವರ್ಷಗಳಲ್ಲಿ ಅವರ ಅಭಿನಯದ ಮೂರ್ನಾಲ್ಕು ಚಿತ್ರಗಳು ಬಿಡಗುಡೆಯಾಗಲಿವೆ.





