ಈ ಹಿಂದೆ ‘ಹೊಂಬಣ್ಣ’ ಮತ್ತು ‘ಎಂಥಾ ಕಥೆ ಮಾರಾಯ’ ಎಂಬ ಚಿತ್ರಗಳನ್ನು ನಿರ್ದೇಶನ ಮಾಡಿದ್ದ ರಕ್ಷಿತ್ ತೀರ್ಥಹಳ್ಳಿ, ತಮ್ಮ ಮೂರನೆಯ ಚಿತ್ರದೊಂದಿಗೆ ವಾಪಸ್ಸಾಗಿದ್ದಾರೆ. ಈ ಬಾರಿ ಸಹ ಅವರು ತಮ್ಮದೇ ಕಥೆಗೆ ದೃಶ್ಯರೂಪ ನೀಡಿದ್ದಾರೆ. ಅದೇ ‘ತಿಮ್ಮನ ಮೊಟ್ಟೆಗಳು’.
‘ತಿಮ್ಮನ ಮೊಟ್ಟೆಗಳು’ ಚಿತ್ರವು ಈಗಾಗಲೇ ಹಲವು ಅಂತರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನವಾಗುತ್ತಿದ್ದು, ರಾಜ್ಯದಲ್ಲಿ ಬಿಡುಗಡೆ ಆಗುವುದಕ್ಕೆ ಸಜ್ಜಾಗಿದೆ. ಚಿತ್ರವು ಜೂನ್.27ರಂದು ಬಿಡುಗಡೆ ಆಗುತ್ತಿದ್ದು, ಅದಕ್ಕೂ ಮೊದಲು ಇತ್ತೀಚೆಗೆ ಟ್ರೇಲರ್ ಬಿಡುಗಡೆ ಆಗಿದೆ. ಹಿರಿಯ ನಿರ್ದೇಶಕ ಪಿ.ಶೇಷಾದ್ರಿ, ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದ್ದಾರೆ.
ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿದ ಶೇಷಾದ್ರಿ, ‘ನಾನು ಈ ಚಿತ್ರವನ್ನು ಕೊಲ್ಕತ್ತಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನೋಡಿದ್ದೇನೆ. ಈಗಿನ ಪರಿಸ್ಥಿತಿಗೆ ತಕ್ಕಂತೆ ಕಥಾವಸ್ತುವನ್ನು ನಿರ್ದೇಶಕರು ಆಯ್ಕೆ ಮಾಡಿಕೊಂಡಿದ್ದಾರೆ. ಚಿತ್ರ ಚೆನ್ನಾಗಿ ಮೂಡಿಬಂದಿದೆ. ಈಗ ದಿನಕ್ಕೊಂದು ಚಿತ್ರದಂತೆ ವರ್ಷಕ್ಕೆ 360 ಚಿತ್ರಗಳು ಬಿಡುಗಡೆಯಾಗುತ್ತಿದೆ. ಆದರಿಂದ ಚಿತ್ರಮಂದಿರಕ್ಕೆ ಜನರು ಬರುವ ಸಂಖ್ಯೆ ಕಡಿಮೆಯಾಗಿದೆ. ಚಿತ್ರ ಬಿಡುಗಡೆ ಸಂಖ್ಯೆ ಕಡಿಮೆಯಾಗಬೇಕು. ಆಗ ಇಂತಹ ಸದಭಿರುಚಿಯ ಚಿತ್ರಗಳನ್ನು ನೋಡಲು ಜನರು ಚಿತ್ರಮಂದಿರಗಳಿಗೆ ಬರುತ್ತಾರೆ’ ಎಂದರು.
ಚಿತ್ರದ ಕುರಿತು ಮಾತನಾಡುವ ರಕ್ಷಿತ್ ತೀರ್ಥಹಳ್ಳಿ, ‘ಈ ಚಿತ್ರವು ನಾನು ಬರೆದಿರುವ ‘ಕಾಡಿನ ನೆಂಟರು’ ಕಥಾಸಂಕಲನದಲ್ಲಿರುವ ‘ತಿಮ್ಮನ ಮೊಟ್ಟೆಗಳು’ ಕಥೆಯನ್ನು ಆಧರಿಸಿದೆ. ಪಶ್ಚಿಮ ಘಟ್ಟದ ಕಾಡುಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುವ ಕಾಳಿಂಗ ಸರ್ಪದ ಕುರಿತು ಚಿತ್ರ ಸಾಗುತ್ತದೆ. ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಬಾಂಧವ್ಯದ ಕುರಿತಾದ ಕಥೆ ಇದಾಗಿದ್ದು, ಅಮೇರಿಕಾದ ಡಲ್ಲಾಸ್ ನಗರದಲ್ಲಿ ಇತ್ತೀಚೆಗೆ ಚಿತ್ರದ ಪ್ರಿಮೀಯರ್ ನಡೆದಿದೆ. ಅಲ್ಲಿನ ಜನರು ಚಿತ್ರವನ್ನು ಬಹಳ ಇಷ್ಟಪಟ್ಟಿದ್ದಾರೆ. ಪ್ರಸಿದ್ದ ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲೂ ಪ್ರದರ್ಶನವಾಗಿರುವ ನಮ್ಮ ಚಿತ್ರ ಜೂನ್ 27 ರಂದು ಬಿಡುಗಡೆಯಾಗುತ್ತಿದೆ’ ಎಂದರು.
ಚಿತ್ರದಲ್ಲಿ ಸುಚೇಂದ್ರ ಪ್ರಸಾದ್ ಒಂದು ಮುಖ್ಯ ಪಾತ್ರ ನಿರ್ವಹಿಸಿದ್ದು, ‘ಪ್ರಕೃತಿ ಮತ್ತು ಮನುಷ್ಯನ ನಡುವಿನ ಸೂಕ್ಷ್ಮ ಸಂವೇದನೆಗಳು ಈ ಚಿತ್ರದಲ್ಲಿದೆ. ನನ್ನ ಪಾತ್ರ ಕೂಡ ಚೆನ್ನಾಗಿದೆ. ಎಲ್ಲರೂ ನೋಡಿ ಪ್ರೋತ್ಸಾಹಿಸಿ ಎಂದರು.
ಶ್ರೀಕೃಷ್ಣ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಆದರ್ಶ ಅಯ್ಯಂಗಾರ್ ನಿರ್ಮಿಸಿರುವ ಈ ಚಿತ್ರದಲ್ಲಿ ಕೇಶವ್, ಆಶಿಕಾ ಸೋಮಶೇಖರ್, ಪ್ರಗತಿ ಪ್ರಭು, ರಾಘು ರಾಮನಕೊಪ್ಪ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಹೇಮಂತ್ ಜೋಯಿಸ್ ಸಂಗೀತ ಸಂಯೋಜಿಸಿದ್ದಾರೆ.