Mysore
21
overcast clouds

Social Media

ಗುರುವಾರ, 13 ಆಗಸ್ಟ್ 2026
Light
Dark

ಪೊದೆಗಳ ನಡುವೆ ಮರೆಯಾಗಿರುವ ಚನ್ನಕೇಶವ ದೇವಾಲಯ

ಚಿತ್ರಾ ವೆಂಕಟರಾಜು

ಪಿರಿಯಾಪಟ್ಟಣದಲ್ಲಿ ಅಷ್ಟು ಪ್ರಸಿದ್ಧಿ ಪಡೆಯದ ಹೊಯ್ಸಳರ ಕಾಲದ ಚನ್ನಕೇಶವ ದೇವಾಲಯವಿದೆ. ಹೊಯ್ಸಳರ ಶೈಲಿಯ ವಾಸ್ತುಶಿಲ್ಪ ದಲ್ಲಿರುವ ಈ ದೇವಾಲಯದ ಚನ್ನಕೇಶವ ಪಟ್ಟಣದ ಕರಿಬಸಪ್ಪ ಲೇಔಟಿನಲ್ಲಿ ಪೊದೆಗಳ ನಡುವೆ ಮರೆಯಾಗಿದ್ದಾನೆ. ಹೊಯ್ಸಳರ ಕಾಲದ ಕಂಬಗಳು, ವಿಶಾಲವಾದ ಪ್ರಾಂಗಣ, ಒಳಗೆ ಗರ್ಭಗುಡಿಯಲ್ಲಿ ಚನ್ನಕೇಶವ ಮಸಣಿಕಮ್ಮ, ಕನ್ನಂಬಾಡಮ್ಮನಿಂದ ಸ್ವಲ್ಪ ದೂರದಲ್ಲೇ ಊರಿಗೂ ತನಗೂ ಸಂಬಂಧವೇ ಇಲ್ಲ ವೇನೋ ಎಂಬಂತೆ ನಿಂತಿದ್ದಾನೆ. ಮೊದಲು ಪುರಾತತ್ವ ಇಲಾಖೆಗೆ ಸೇರಿದ್ದ ಈ ದೇವಾಲಯವನ್ನು ದೇವಾಲಯದ ಕಮಿಟಿಯ ವರು ಮುಜರಾಯಿ ಇಲಾಖೆಗೆ ಸೇರಿಸ ಬೇಕೆಂದು ಪತ್ರ ವ್ಯವಹಾರ ನಡೆಸುತ್ತಿದ್ದಾರೆ. ಕಳೆದ ೨೦ ವರ್ಷಗಳಿಂದಲೂ ಪ್ರತಿದಿನ ನಾಗರಾಜು ಅವರು ಈ ದೇವಾಲಯದಲ್ಲಿ ಪೂಜೆ ನಡೆಸಿಕೊಂಡು ಬರುತ್ತಿದ್ದಾರೆ. ಪ್ರತಿ ಶನಿವಾರ ಚನ್ನಕೇಶವನಿಗೆ ಅಭಿಷೇಕ ನಡೆಯುತ್ತದೆ. ಅವರು ಹೇಳುವ ಪ್ರಕಾರ, ಬೇಲೂರಿನಲ್ಲಿರುವ ಚನ್ನಕೇಶವ ಇಲ್ಲಿಂದಲೇ ಅಲ್ಲಿಗೆ ಹೋದದ್ದು. ಮೈಸೂರು ಮಹಾರಾಜರಿಗೂ ಪಿರಿಯಾ ದೊರೆಗೂ ಯುದ್ಧ ನಡೆಯುತ್ತದೆ. ಇಲ್ಲಿನ ಗ್ರಾಮದೇವತೆ ಮಸಣಿಕಮ್ಮ, ಚಾಮುಂಡಿಯ ತಂಗಿ. ಎಲ್ಲಿಯತನಕ ಮಸಣಿಕಮ್ಮ ಈ ಊರಲ್ಲಿರುತ್ತಾಳೋ ಅಲ್ಲಿಯವರೆಗೆ ಇದನ್ನು ಗೆಲ್ಲಲು ಸಾಧ್ಯವಿಲ್ಲ ಎಂದು ತಿಳಿದ ಮಹಾರಾಜರು ಚಾಮುಂಡಿಯ ಬಳಿ ಪ್ರಾರ್ಥಿಸಿಕೊಳ್ಳುತ್ತಾರೆ. ಆಗ ಚಾಮುಂಡಿ ಬೇರೆ ಏನೋ ಕಾರಣ ಹೇಳಿ ತಂಗಿ ಮಸಣಿ ಕಮ್ಮನನ್ನು ಮೈಸೂರಿಗೆ ಕರೆಸಿಕೊಳ್ಳುತ್ತಾಳೆ. ಆಗ ನಡೆದ ಯುದ್ಧದಲ್ಲಿ ಇಲ್ಲಿಯ ಪಿರಿಯಾ ದೊರೆ ಸೋಲುತ್ತಾನೆ.

ಆಗ ಸಿಟ್ಟಿಗೆದ್ದ ದೊರೆ ‘ನೀನಿದ್ದಾಗಲೂ ನಾನು ಸೋತೆನಲ್ಲಾ, ನೀನು ಇಲ್ಲಿದ್ದು ಏನು ಪ್ರಯೋ ಜನವಾಯಿತು?’ ಎಂದು ಚನ್ನಕೇಶವ ಮೂರ್ತಿಯನ್ನು ಹಳಿಯುತ್ತಾನೆ. ಆಗ ಚನ್ನಕೇಶವ ಇಲ್ಲಿಂದ ಹೊರಟು ಹೋದ ಎಂಬ ಕತೆಯನ್ನು ಹೇಳುತ್ತಾರೆ. ಆದರೂ ಅವನ ಭಕ್ತರು ನಿರಂತರವಾಗಿ ಪೂಜೆ ನಡೆಸಿಕೊಂಡು ಬರುತ್ತಿದ್ದಾರೆ ಮತ್ತು ಇದರ ಜೀರ್ಣೋದ್ಧಾರಕ್ಕಾಗಿ ಕಾಯುತ್ತಿದ್ದಾರೆ.

Tags:
error: Content is protected !!