ಒಂದು ಚಿತ್ರಕ್ಕೆ ಹಾಕಿದ ದುಡ್ಡು ಬಂದಿದೆ, ಮೇಲೆ ಸಾಕಷ್ಟು ಲಾಭವೂ ಸಿಕ್ಕಿದೆ ಎಂದರೆ ಅದು ಯಶಸ್ಸು ಎಂದು ಪರಿಗಣಿಸಲಾಗುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಚಿತ್ರಗಳು ಹಾಕಿದ ಹಣ ಮರಳಿ ಪಡೆಯುವಲ್ಲಿ ವಿಫಲವಾಗಿವೆ. ಕಳೆದ ವಾರ ಬಿಡುಗಡೆಯಾದ ‘ಜಂಗಲ್ ಮಂಗಲ್’ ಇನ್ನೂ ಹಾಕಿದ ಬಂಡವಾಳವನ್ನು ವಾಪಸ್ಸು ಪಡೆದಿಲ್ಲ. ಆದರೆ, ಚಿತ್ರತಂಡದವರಿಗೆ ಚಿತ್ರಗೆ ಸಿಗುತ್ತಿರುವ ಪ್ರತಿಕ್ರಿಯೆ ಬಗ್ಗೆ ಖುಷಿ ಇದೆಯಂತೆ.
ಈ ಚಿತ್ರದ ಕುರಿತು ಮಾತನಾಡುವ ಚಿತ್ರದ ನಾಯಕ ಯಶ್ ಶೆಟ್ಟಿ, ‘ನಮ್ಮ ಚಿತ್ರ ಕಮರ್ಷಿಯಲ್ ಆಗಿ ಗೆದ್ದಿದೆ ಎಂದು ಹೇಳಲು ಪತ್ರಿಕಾಗೋಷ್ಠಿ ಆಯೋಜಿಸಿಲ್ಲ. ಆದರೆ, ಇಲ್ಲಿಯವರೆಗೂ ನೋಡಿರುವವರ ಮನ ಗೆದ್ದಿದೆ ಎಂದು ಹೇಳಲು ಪತ್ರಿಕಾಗೋಷ್ಠಿ ಆಯೋಜಿಸಿದ್ದೇವೆ. ಚಿತ್ರ ಬಿಡುಗಡೆಯಾದಾಗಿನಿಂದ ಇದುವರೆಗೂ ನಮ್ಮ ಚಿತ್ರ ನೋಡಿದ ಯಾರೊಬ್ಬರೂ ಕೂಡ ಚಿತ್ರ ಚೆನ್ನಾಗಿಲ್ಲ ಎಂದು ಹೇಳಿಲ್ಲ. ಅದು ನಮಗೆ ಬಹಳ ಖುಷಿಯಾದ ವಿಚಾರ. ನಮ್ಮ ಚಿತ್ರ ವೀಕ್ಷಿಸಿದ ನಿರ್ದೇಶಕ ಗುರು ದೇಶಪಾಂಡೆ, ತಾವೇ ಸ್ವತಃ ಶರಣ್ ಹಾಗೂ ಧ್ರುವ ಸರ್ಜಾ ಅವರಿಗೆ ಕರೆ ಮಾಡಿ ಚಿತ್ರ ನೋಡುವುದಕ್ಕೆ ಹೇಳಿದರು. ಶರಣ್ ಹಾಗೂ ಧ್ರುವ ಸರ್ಜಾ ಅವರು ನಮ್ಮ ಚಿತ್ರ ನೋಡಿ ಮೆಚ್ಚುಗೆಯ ಮಾತುಗಳಾಡಿದರು. ಅದರಿಂದ ನಮಗೆ ಬಹಳ ಅನುಕೂಲವಾಯಿತು. ಇನ್ನು, ಚಿತ್ರ ನೋಡಿದ ಕೆಲವರು ತಮ್ಮ ಸ್ನೇಹಿತರಿಗೆ ನೋಡಿ ಅಂತ ಹೇಳುತ್ತಿರುವುದು, ಕೆಲವು ಕಡೆ ತಾವೇ ಶೋಗಳನ್ನು ಆಯೋಜಿಸುತ್ತಿರುವುದು … ಇದೆಲ್ಲಾ ನೋಡಿ ಮನ ತುಂಬಿ ಬಂದಿದೆ’ ಎಂದರು.
ಚಿತ್ರ ನೋಡಿದ ಕೆಲವರು ಮಲಯಾಳಂ ಚಿತ್ರ ಇದ್ದ ಹಾಗೆ ಇದೆ ಎಂದರಂತೆ, ಈ ಕುರಿತು ಮಾತನಾಡುವ ನಿರ್ದೇಶಕ ರಕ್ಷಿತ್ ಕುಮಾರ್, ‘ಇದರಿಂದ ಒಂದು ಕಡೆ ಖುಷಿ. ಮತ್ತೊಂದು ಕಡೆ ಬೇರೆ ಭಾಷೆಯವರು ಈ ಚಿತ್ರ ನೋಡಿ ಕನ್ನಡದಲ್ಲಿ ಒಂದೊಳ್ಳೆ ಸಿನಿಮಾ ಬಂದಿದೆ ಎಂದು ಹೇಳಬೇಕು. ಮುಂದೊಂದು ದಿನ ಆ ದಿನ ಬರುತ್ತದೆ ಎಂಬ ವಿಶ್ವಾಸವಿದೆ. ಎರಡನೇ ವಾರಕ್ಕೆ ಅಡಿ ಇಡುತ್ತಿರುವ ಈ ಸಂದರ್ಭದಲ್ಲೂ ಅನೇಕ ಚಿತ್ರಮಂದಿರಗಳಲ್ಲಿ ನಮ್ಮ ಚಿತ್ರ ಪ್ರದರ್ಶನ ಕಾಣುತ್ತಿದೆ’ ಎಂದರು.
ತಮ್ಮ ಪಾತ್ರಕ್ಕೆ ಹಾಗೂ ಚಿತ್ರಕ್ಕೆ ಸಿಗುತ್ತಿರುವ ಪ್ರಶಂಸೆಗೆ ಬಹಳ ಸಂತೋಷವಾಗಿದೆ ಎಂದು ‘ಉಗ್ರಂ’ ಮಂಜು ಹೇಳಿದರೆ, ತಮ್ಮ ಅಭಿನಯದ ಮೊದಲ ಚಿತ್ರಕ್ಕೆ ಜನರು ತೋರುತ್ತಿರುವ ಒಲವಿಗೆ ನಾಯಕಿ ಹರ್ಷಿಕ ರಾಮಚಂದ್ರ ಧನ್ಯವಾದ ಹೇಳಿದರು.





