ರಕ್ಷಿತಾ ಸಹೋದರ ರಾಣ ಪುನೀತ್ ರಂಗಸ್ವಾಮಿ ನಿರ್ದೇಶನದ ಹೊಸ ಚಿತ್ರವೊಂದರಲ್ಲಿ ನಟಿಸುತ್ತಿರುವ ವಿಷಯ ಗೊತ್ತೇ ಇದೆ. ಈ ಚಿತ್ರದ ಚಿತ್ರೀಕರಣ ಕೆಲವು ತಿಂಗಳುಗಳ ಹಿಂದೆಯೇ ಪ್ರಾರಂಭವಾಗಿ, ಇನ್ನೇನು ಮುಗಿಯುವ ಹಂತಕ್ಕೆ ಬಂದಿದೆ. ಆದರೆ, ಚಿತ್ರದ ಹೆಸರನ್ನು ಚಿತ್ರತಂಡ ಘೋಷಿಸಿರಲಿಲ್ಲ. ಇತ್ತೀಚೆಗೆ ಚಿತ್ರದ ಟೈಟಲ್ ಟೀಸರ್ ಬಿಡುಗಡೆಯಾಗಿದ್ದು, ಚಿತ್ರಕ್ಕೆ ‘ಏಳುಮಲೆ’ ಎಂದು ಹೆಸರಿಡಲಾಗಿದೆ.
ಒರಾಯನ್ ಮಾಲ್‍ನ ಪಿವಿಆರ್ ಚಿತ್ರಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಶಿವರಾಜಕುಮಾರ್ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಇನ್ನು, ‘ಜೋಗಿ’ ಪ್ರೇಮ್ ಸಹ ಈ ಸಂದರ್ಭದಲ್ಲಿ ಹಾಜರಿದ್ದರು. ಈ ಚಿತ್ರವನ್ನು ತರುಣ್ ಸುಧೀರ್ ಮತ್ತು ಅಟ್ಲಾಂಟ ನಾಗೇಂದ್ರ ಜೊತೆಯಾಗಿ ನಿರ್ಮಿಸುತ್ತಿದ್ದಾರೆ. ರಾಣಗೆ ನಾಯಕಿಯಾಗಿ ‘ಮಹಾನಟಿ’ ಖ್ಯಾತಿಯ ಪ್ರಿಯಾಂಕಾ ನಟಿಸುತ್ತಿದ್ದಾರೆ.
ತರುಣ್ ಸುಧೀರ್ ಮಾತನಾಡಿ, ‘ಚಿತ್ರರಂಗ ಅನ್ನೋದು ಗೋಲ್ಡ್ ಮೈನಿಂಗ್. ಕೆಲವೊಮ್ಮೆ ಬೇಗ ಚಿನ್ನ ಸಿಗುತ್ತದೆ. ಕೆಲವೊಮ್ಮೆ ತಡವಾಗಿ ಚಿನ್ನ ಸಿಗುತ್ತದೆ. ಇವತ್ತು ಟೈಟಲ್ ಟೀಸರ್ ಲಾಂಚ್ ಮಾಡುತ್ತಿದ್ದೇವೆ. ಒಂದೊಳ್ಳೆಯ ಮೊತ್ತಕ್ಕೆ ಆನಂದ್ ಆಡಿಯೋ ಹಕ್ಕುಗಳನ್ನು ಖರೀದಿಸಿದೆ. ಒಂದೊಳ್ಳೆಯ ವಿಷಯ ಇರುವ ಸಿನಿಮಾ ಅಂದರೆ, ಅದಕ್ಕೆ ಬೆಲೆ ಇದ್ದೇ ಇರುತ್ತದೆ’ ಎಂದರು.
ನಿರ್ದೇಶಕ ಪುನೀತ್ ರಂಗಸ್ವಾಮಿ ಮಾತನಾಡಿ, ‘ಇದು ಸಂಘರ್ಷದ ಕಥೆಯಲ್ಲ. ಇದೊಂದು ಪ್ರೇಮಕಥೆ. ಆ ಕಾಲಘಟ್ಟದಲ್ಲಿ ನಡೆದ ಕಥೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಚಿತ್ರದಲ್ಲಿ ಹೇಳಿದ್ದೇವೆ’ ಎಂದು ತಿಳಿಸಿದರು.
ಈ ಚಿತ್ರವು ನೈಜ ಘಟನೆಯನ್ನು ಆಧರಿಸಿದ್ದು, ಚಾಮರಾಜನಗರ, ಸೇಲಂ, ಈರೋಡ್ ಸೇರಿದಂತೆ ಕರ್ನಾಟಕ ಮತ್ತು ತಮಿಳುನಾಡು ಗಡಿ ಭಾಗದ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಈ ಚಿತ್ರದಲ್ಲಿ ರಾಣ ಮತ್ತು ಪ್ರಿಯಾಂಕಾ ಆಚಾರ್ ಜೊತೆಗೆ ಜಗಪತಿ ಬಾಬು, ನಾಗಾಭರಣ, ಕಿಶೋರ್ ಕುಮಾರ್, ಸರ್ದಾರ್ ಸತ್ಯ, ಜಗಪ್ಪ ಇದ್ದಾರೆ. ಅದ್ವೈತ ಗುರುಮೂರ್ತಿ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ, ಡಿ. ಇಮ್ಮನ್ ಸಂಗೀತ ಚಿತ್ರಕ್ಕಿದೆ.
‘ಏಳುಮಲೆ’ ಚಿತ್ರವು ಕನ್ನಡವಲ್ಲದೆ, ತಮಿಳು ಮತ್ತು ತೆಲುಗಿನಲ್ಲೂ ಬಿಡುಗಡೆಯಾಗಲಿದೆ.





