ಶ್ರೀನಗರ ಕಿಟ್ಟಿ ಹೊಸ ಅವತಾರವೆತ್ತುವುದಕ್ಕೆ ತಯಾರಾಗುತ್ತಿದ್ದಾರೆ. ಈ ಬಾರಿ ಅವರು ‘ವೇಷಗಳು’ ಎಂಬ ಚಿತ್ರದಲ್ಲಿ ಜೋಗಪ್ಪ, ಜೋಗುತ್ತಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ಬಸಪ್ಪ ಮತ್ತು ಬಸಪ್ಪ ಎಂಬ ಪಾತ್ರಗಳನ್ನು ನಿರ್ವಹಿಸುತ್ತಿದ್ದು, ಸೆಪ್ಟೆಂಬರ್ ತಿಂಗಳಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ. ಅದಕ್ಕೂ ಮೊದಲು ಇತ್ತೀಚೆಗೆ ಕಿಟ್ಟಿ ಹುಟ್ಟುಹಬ್ಬದ ಸಂದರ್ಭದಲ್ಲಿ ಚಿತ್ರದ ಶೀರ್ಷಿಕೆ ಟೀಸರ್ ಬಿಡುಗಡೆ ಮಾಡಲಾಗಿದೆ.
ಈ ಚಿತ್ರವು ಪತ್ರಕರ್ತ ರವಿ ಬೆಳಗೆರೆ ಅವರು ಜೋಗತಿಯರ ಜೀವನದ ಆಗು ಹೋಗುಗಳ ಬಗ್ಗೆ ಬರೆದಿರುವ ‘ವೇಷಗಳು’ ಎಂಬ ಸಣ್ಣ ಕಥೆಯನ್ನಾಧರಿಸಿದ ಚಿತ್ರವಾಗಿದೆ. ಈ ಚಿತ್ರವನ್ನು ಗ್ರೀನ್ ಟ್ರೀ ಸ್ಟುಡಿಯೋಸ್ ಅಡಿಯಲ್ಲಿ ಕಿಶನ್ ರಾವ್ ದಳವಿ ನಿರ್ಮಿಸುವುದರ ಜೊತೆಗೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.
ಈ ಚಿತ್ರದ ಕುರಿತು ಮಾತನಾಡುವ ಶ್ರೀನಗರ ಕಿಟ್ಟಿ, ‘ರವಿ ಬೆಳಗೆರೆ ಅವರ ಬರಹ, ಬರವಣಿಗೆ, ತಾಕತ್ತು, ಅದಕ್ಕಿದ್ದ ಉದ್ಧ, ಆಳ, ಅಳತೆಗೆ ಬೇರೆ ಆಯಾಮ ಇದೆ. ಅವರ ಕಥೆಗಳಲ್ಲಿರುವ ವೈವಿಧ್ಯತೆ ಅದ್ಭುತ. ‘ವೇಷಗಳು’ ನನ್ನನ್ನು ಬಹಳ ಕಾಡಿದ ಕಥೆ. ಅದನ್ನು ಆಧರಿಸಿ ಈ ಚಿತ್ರ ಮಾಡಲಾಗುತ್ತಿದೆ. ಸದ್ಯದಲ್ಲೇ ಮಂಜಮ್ಮ ಜೋಗತಿ ಅವರನ್ನು ಸಂಪರ್ಕಿಸಿ ಪಾತ್ರಕ್ಕಾಗಿ ಒಂದಿಷ್ಟು ಮಾಹಿತಿ ಪಡೆಯಲಿದ್ದೇನೆ. ಆ ನಂತರ ಸಿದ್ಧತೆ ಮಾಡಿಕೊಂಡು ಚಿತ್ರೀಕರಣದಲ್ಲಿ ಭಾಗವಹಿಸುತ್ತೇನೆ’ ಎಂದರು.
‘ವೇಷಗಳು’ ಚಿತ್ರದ ಚಿತ್ರೀಕರಣ ಮಧ್ಯಪ್ರದೇಶದ ಮಹಾಕಾಲೇಶ್ವರ, ಉತ್ತರ ಕರ್ನಾಟಕ, ಬೆಂಗಳೂರು ಹಾಗೂ ಮೈಸೂರಲ್ಲಿ ನಡೆಯಲಿದೆ. ಮುಂದಿನ ದಿನಗಳಲ್ಲಿ ಚಿತ್ರದ ಉಳಿದ ಕಲಾವಿದರ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ನಿರ್ದೇಶಕ ಕಿಶನ್ ರಾವ್ ತಿಳಿಸಿದರು. ಚಿತ್ರಕ್ಕೆ ಕೌಶಿಕ್ ಹರ್ಷ ಸಂಗೀತ, ರಾಜ್ ಗುರು ದತ್ತರಾಜ್ ಸಂಭಾಷಣೆ, ಅಕ್ಷಯ್ ಪಿ.ರಾವ್ ಸಂಕಲನವಿದೆ.





