ಕಳೆದ ವರ್ಷವೇ ಶ್ರೀಮುರಳಿ ಅಭಿನಯದ ‘ಪರಾಕ್’ ಚಿತ್ರದ ಘೋಷಣೆಯಾಗಿತ್ತು. ‘ಬಘೀರ’ ಬಿಡುಗಡೆಯಾದರೂ ಚಿತ್ರದ ಬಗ್ಗೆ ಸುದ್ದಿಯೇ ಇರಲಿಲ್ಲ. ಇದೀಗ ‘ಪರಾಕ್’ ಕೊನೆಗೂ ಸೆಟ್ಟೇರಿದೆ.
ಸೋಮವಾರ ಬೆಂಗಳೂರಿನ ಬಂಡೆ ಮಹಾಂಕಾಳಿ ದೇಗುಲದಲ್ಲಿ ‘ಪರಾಕ್’ ಚಿತ್ರದ ಮುಹೂರ್ತ ನೆರವೇರಿದೆ. ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಕ್ಲ್ಯಾಪ್ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದರು.
ಇದನ್ನು ಓದಿ : ‘ಕಾಂತಾರ – ಚಾಪ್ಟರ್ 1’ರ ಜೊತೆಗೆ ‘ಕೋಣ’ ಚಿತ್ರದ ಟ್ರೇಲರ್ …
ಈ ಚಿತ್ರದ ಕುರಿತು ಮಾತನಾಡುವ ಶ್ರೀಮುರಳಿ, ‘ಪರಾಕ್’ ಚಿತ್ರದ ಬಗ್ಗೆ ಹೆಚ್ಚು ಹೇಳುವುದು ಕಷ್ಟ. ಇದೊಂದು ವಿಂಟೇಜ್ ಶೈಲಿಯ ಸಿನಿಮಾ. ಯಾವ ಕಾಲಘಟ್ಟದಲ್ಲಿ ನಡೆಯುತ್ತದೆ ಎಂದು ಮುಂದೆ ಹೇಳುತ್ತೇವೆ. ‘ಬಘೀರ’ ನಂತರ ಯಾವ ತರಹದ ಚಿತ್ರದಲ್ಲಿ ನಟಿಸಬೇಕು ಎಂದು ತುಂಬಾ ಟೆನ್ಶನ್ ಇತ್ತು. ಸುಮಾರು 200 ಕಥೆಗಳನ್ನು ಕೇಳಿದ್ದೆ. ಈ ಚಿತ್ರದ ಕಥೆಯನ್ನು ಎರಡು ವರ್ಷಗಳ ಹಿಂದೆಯೇ ಕೇಳಿದ್ದೆ. ಮೊದಲು ಈ ಚಿತ್ರ ಶುರುವಾಗುತ್ತದೆ. ಇದೊಂದು ಸ್ಟೈಲಿಶ್ ಮತ್ತು ಅರ್ಥಪೂರ್ಣ ಚಿತ್ರವಾಗಲಿದೆ. ಈ ಚಿತ್ರಕ್ಕೆ ನನ್ನ ಲುಕ್ ಬದಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚುಹೆಚ್ಚು ಚಿತ್ರಗಳನ್ನು ಮಾಡುವೆ. ಶೂಟಿಂಗ್ ಎಲ್ಲಿ, ನಾಯಕಿ ಯಾರು, ಯಾವ ಬಿಡುಗಡೆ ಎಂದು ಈಗಲೇ ಹೇಳುವುದು ಕಷ್ಟ. ಮುಂದಿನ ದಿನಗಳಲ್ಲಿ ಹೇಳುತ್ತೇನೆ. ನಿರ್ದೇಶಕರ ಕೆಲಸ ಮತ್ತು ಆಯ್ಕೆ ಇಷ್ಟವಾಯಿತು. ಹಾಗಾಗಿ, ಅವರ ಜೊತೆಗೆ ಕೈಜೋಡಿಸಿದ್ದೇನೆ’ ಎಂದರು.
ಈ ಚಿತ್ರವನ್ನು ಹಾಲೇಶ್ ಕೋಗುಂಡಿ ನಿರ್ದೇಶನ ಮಾಡುತ್ತಿದ್ದು, ಇದು ಅವರ ಮೊದಲ ಚಿತ್ರ. ಬ್ರ್ಯಾಂಡ್ ಸ್ಟುಡಿಯೋಸ್ ಬ್ಯಾನರ್ ಅಡಿ ‘ಪರಾಕ್’ ನಿರ್ಮಾಣವಾಗುತ್ತಿದೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತ, ಸಂದೀಪ್ ವಲ್ಲುರಿ ಛಾಯಾಗ್ರಹಣವಿದೆ





