ಶಿವರಾಜಕುಮಾರ್, ಉಪೇಂದ್ರ ಮತ್ತು ರಾಜ್ ಬಿ. ಶೆಟ್ಟಿ ಜೊತೆಯಾಗಿ ನಟಿಸಿರುವ ‘45’ ಚಿತ್ರದಲ್ಲಿ ಹಾಡುಗಳು ಕಡಿಮೆಯಂತೆ. ಅದರಲ್ಲೂ ಮೂವರು ಸ್ಟಾರ್ ನಟರು ಇದ್ದರೂ, ಮೂವರೂ ಇರುವ ಒಂದು ಹಾಡು ಇಲ್ಲದಿದ್ದರೆ, ಅವರ ಅಭಿಮಾನಿಗಳಿಗೆ ಬೇಸರವಾಗೋದು ಗ್ಯಾರಂಟಿ ಎಂದು ನಿರ್ದೇಶಕ ಮತ್ತು ಸಂಗೀತ ನಿರ್ದೇಶಕ ಅರ್ಜುನ್ ಜನ್ಯಗೆ ಗೊತ್ತಿದೆ. ಅದೇ ಕಾರಣಕ್ಕೆ ಅವರೊಂದು ಪ್ರಮೋಷನಲ್ ಹಾಡು ಮಾಡಿದ್ದಾರೆ. ಈ ಹಾಡು ಚಿತ್ರದಲ್ಲಿ ಇಲ್ಲದಿದ್ದರೂ, ಚಿತ್ರದ ಪ್ರಚಾರಕ್ಕಾಗಿ ಮಾತ್ರ ಮಾಡಲಾಗಿದೆ.
‘AFRO ಟಪಾಂಗ್’ ಎಂಬ ಈ ಹಾಡಿನ ವಿಶೇಷತೆಯೆಂದರೆ, ಈ ಹಾಡಿನಲ್ಲಿ ಉಗಾಂಡಾದ ಘೆಟ್ಟೋ ಕಿಡ್ಸ್ ಹೆಜ್ಜೆ ಹಾಕಿದ್ದಾರೆ. ಈ ಹಾಡಿನಲ್ಲಿ ಘೆಟ್ಟೋ ಕಿಡ್ಸ್ ಜೊತೆಗೆ ಶಿವರಾಜಕುಮಾರ್, ಉಪೇಂದ್ರ ಹಾಗೂ ರಾಜ್ ಬಿ. ಶೆಟ್ಟಿ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಕನ್ನಡ ರಾಜ್ಯೋತ್ಸವದ ದಿನ ಈ ಹಾಡಿನ ಬಿಡುಗಡೆ ಆಯಿತು.
ಇದನ್ನು ಓದಿ: ಡಿಸೆಂಬರ್ 25ರಂದು ಬಿಡುಗಡೆಯಾಗಲಿದೆ ‘45’
ನಾನು ನಿರ್ದೇಶಕನಾಗಲು ಶಿವರಾಜಕುಮಾರ್ ಅವರೆ ಕಾರಣ ಎನ್ನುವ ಅರ್ಜುನ್ ಜನ್ಯ, ‘ನಮ್ಮ ‘45’ ಚಿತ್ರದಲ್ಲಿ ಹಾಡಿಲ್ಲ. ಆದರೆ, ಪ್ರಮೋಷನಲ್ ಸಾಂಗ್ ಮಾಡಬೇಕೆಂಬ ಆಸೆ ಇತ್ತು. ಮಾಮೂಲಿ ತರಹ ಮಾಡುವುದು ಬೇಡ ಅಂದುಕೊಂಡೆವು. ಆಗ ನನಗೆ ಉಗಾಂಡದ ಘೆಟ್ಟೋ ಕಿಡ್ಸ್ ಈ ಪ್ರಮೋಷನ್ ಹಾಡಿನಲ್ಲಿ ಅಭಿನಯಿಸಿದರೆ ಚೆಂದ ಎನಿಸಿತು. ಕಷ್ಟಪಟ್ಟು ಅವರನ್ನು ಸಂಪರ್ಕ ಮಾಡಿದ್ದೆವು. ಇವರ ಜೊತೆಗೆ ನಮ್ಮ ಚಿತ್ರದ ಮೂರು ಜನ ನಾಯಕರು ಅಭಿನಯಿಸಿದ್ದಾರೆ. ಎಂ.ಸಿ.ಬಿಜ್ಜು ಈ ಹಾಡನ್ನು ಬರೆದು ಹಾಡಿದ್ದಾರೆ. ಜಾನಿ ಮಾಸ್ಟರ್ ನೃತ್ಯ ನಿರ್ದೇಶನ ಮಾಡಿದ್ದಾರೆ’ ಎಂದು ಮಾಹಿತಿ ನೀಡಿದರು.
‘45’ ಚಿತ್ರ ಬರೀ ಕರ್ನಾಟಕ ಮಾತ್ರ ಅಲ್ಲ, ಇಡೀ ದೇಶಕ್ಕೆ ಸಲ್ಲುವ ಸಿನಿಮಾ ಎನ್ನುವ ಶಿವರಾಜಕುಮಾರ್, ‘ಅಂತಹ ಕಂಟೆಂಟ್ ವುಳ್ಳ ಸಿನಿಮಾ ಇದು. ಅರ್ಜುನ್ ಜನ್ಯ ಈ ಚಿತ್ರದ ಕಥೆ ಹೇಳಿದಾಗ ನೀವೆ ನಿರ್ದೇಶನ ಮಾಡಿ ಎಂದು ಹೇಳಿದ್ದೆ. ಈಗ ಈ ಹಾಡು ನೋಡಿದಾಗ ಅವರ ನಿರ್ದೇಶನದ ಬಗ್ಗೆ ತಿಳಿಯುತ್ತಿದೆ. ನಾನು, ಉಪೇಂದ್ರ ಹಾಗೂ ರಾಜ್ ಬಿ. ಶೆಟ್ಟಿ ಮೂರು ಜನ ಈ ಚಿತ್ರದ ನಾಯಕರು. ಇಲ್ಲಿ ಯಾರೂ ದೊಡ್ಡವರಲ್ಲ. ಅಭಿನಯದಲ್ಲಿ ಎಲ್ಲರಿಗೂ ಸಮಾನವಾದ ಅವಕಾಶವಿದೆ’ ಎಂದು ಶಿವರಾಜಕುಮಾರ್ ತಿಳಿಸಿದರು.
ಈ ಚಿತ್ರದ ಬಗ್ಗೆ ನನಗೆ ಆರಂಭದಿಂದಲೂ ಪ್ರೀತಿ ಎನ್ನುವ ರಾಜ್ ಬಿ. ಶೆಟ್ಟಿ, ‘ಚಿತ್ರದ ಕುರಿತು ನಾನು ಅರ್ಜುನ್ ಜನ್ಯ ಅವರಿಗೆ ಕರೆ ಮಾಡಿ ಕೇಳುತ್ತಿರುತ್ತೇನೆ. ನಾನು ನೋಡಿ ಬೆಳೆದ ಇಬ್ಬರು ಕನ್ನಡ ಚಿತ್ರರಂಗದ ಮಹಾನ್ ನಟರ ಜೊತೆಗೆ ಅಭಿನಯಿಸಿರುವುದು ಬಹಳ ಖುಷಿಯಾಗಿದೆ. ಅವರಿಬ್ಬರು ತೆರೆಯ ಮೇಲೆ ಒಟ್ಟಿಗೆ ಬಂದಾಗ ವಿಷಲ್ ಹಾಕಿ ಸಂಭ್ರಮಿಸಿದ್ದೇನೆ’ ಎಂದರು.





