ಶಿವರಾಜಕುಮಾರ್ ಮಗಳು ನಿವೇದಿತಾ ಶಿವರಾಜಕುಮಾರ್ ತಮ್ಮ ಶ್ರೀ ಮುತ್ತು ಸಿನಿ ಕ್ರಿಯೇಷನ್ಸ್ ಸಂಸ್ಥೆಯಡಿ ನಿರ್ಮಾಣ ಮಾಡುತ್ತಿರುವ ‘ಫೈರ್ ಫ್ಲೈ’ ಚಿತ್ರವು ಡಾ. ರಾಜಕುಮಾರ್ ಅವರ ಹುಟ್ಟುಹಬ್ಬದ ಪ್ರಯುಕ್ತ ಏಪ್ರಿಲ್ 24ರಂದು ಬಿಡುಗಡೆಯಾಗುತ್ತಿದೆ. ಈ ಮಧ್ಯೆ, ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ವಿಶೇಷವೆಂದರೆ ಚಿತ್ರದಲ್ಲಿ ಶಿವರಾಜ್ ಕುಮಾರ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಚಿತ್ರದಲ್ಲಿ ಪಿಜ್ಜಾ ಡೆಲಿವರಿ ಮಾಡುವ ಪಾತ್ರದಲ್ಲಿ ಶಿವರಾಜಕುಮಾರ್ ನಟಿಸಿದ್ದಾರೆ. ಇಲ್ಲಿ ಅವರ ಪಾತ್ರೆ ತೆರೆಯ ಮೇಲೆ ಎಷ್ಟು ಹೊತ್ತು ಇರುತ್ತದೆ? ಏನು ಮಾಡುತ್ತದೆ? ಮುಂತಾದ ಯಾವ ವಿಷಯವನ್ನೂ ಚಿತ್ರತಂಡ ಬಹಿರಂಗಪಡಿಸಿಲ್ಲ.
ಟ್ರೇಲರ್ ಬಿಡುಗಡೆ ಬಳಿಕ ಮಾತನಾಡಿದ ಶಿವರಾಜಕುಮಾರ್, ‘ಮಗಳು ಸಿನಿಮಾ ಮಾಡಿರುವುದು ಬಹಳ ಖುಷಿಯಾಗಿದೆ. ಕಥೆ ಬಹಳ ವಿಭಿನ್ನವಾಗಿರುವುದಷ್ಟೇ, ನನ್ನ ಹೃದಯಕ್ಕೆ ತಟ್ಟಿತು. ಚಿತ್ರದಲ್ಲಿ ಸಾಕಷ್ಟು ವಿಷಯಗಳಿವೆ. ಇದೊಂದು ಮೌಲ್ಯವಿರುವ ಚಿತ್ರ. ವಂಶಿ ಒಳ್ಳೆಯ ಕಥೆ ಮಾಡಿದ್ದಾರೆ. ಒಳ್ಳೆಯ ತಂಡ ಚಿತ್ರಕ್ಕೆ ಕೆಲಸ ಮಾಡಿದೆ. ಚರಣ್ ರಾಜ್ ಸಂಗೀತ ಬಗ್ಗೆ ಮಾತನಾಡುವ ಆಗಿಲ್ಲ. ನಮ್ಮ ಕನ್ನಡದಲ್ಲಿಯೂ ಹೊಸ ತಂಡ ಬರಬೇಕು. ಹೊಸ ಅಲೆ ಬರಬೇಕು ಎಂಬುದು ನನ್ನ ಆಸೆ. ಅವರೇ ನಮ್ಮ ಭಾಷೆ, ಸಂಸ್ಕೃತಿಯನ್ನು ಮುಂದೆ ತೆಗೆದುಕೊಂಡು ಹೋಗಬೇಕು. ಚಿತ್ರವನ್ನು ಜನ ಹೇಗೆ ಸ್ವೀಕರಿಸುತ್ತಾರೆ ಎನ್ನುವುದು ನಂತರ ದವಿಷಯ. ಆದರೆ, ನಮ್ಮ ಪ್ರಯತ್ನ ಇರಬೇಕು. ನಾನು ಈ ಚಿತ್ರದಲ್ಲಿ ನಟಿಸಿದ್ದೇನೆ. ಹೊಸ ಹುಡುಗರು ನಮ್ಮನ್ನು ಇನ್ನಷ್ಟು ಯಂಗ್ ಆಗಿ ತೋರಿಸಿದ್ದಾರೆ’ ಎಂದರು.
ನಿರ್ಮಾಪಕಿ ನಿವೇದಿತಾ ಶಿವರಾಜಕುಮಾರ್ ಮಾತನಾಡಿ, ‘ಇದು ನನ್ನ ಮೊದಲ ಸಿನಿಮಾ. ತಾತನ ಹುಟ್ಟುಹಬ್ಬದ ದಿನ ಬರುತ್ತಿರುವುದು ಬಹಳ ಖುಷಿ ಇದೆ. ಕನ್ನಡ ಸಿನಿಮಾ ನೋಡಲು ಪ್ರೇಕ್ಷಕರು ಬರುತ್ತಿಲ್ಲ ಎಂಬ ಮಾತು ಕೇಳಿಬರುತ್ತಿದೆ. ನಾವು ಒಳ‍್ಳೆಯ ಸಿನಿಮಾ ಮಾಡಿದರೆ, ಜನ ಖಂಡಿತಾ ಬರುತ್ತಾರೆ’ ಎಂದರು.
‘ಫೈರ್ ಫ್ಲೈ’ ಚಿತ್ರಕ್ಕೆ ವಂಶಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ. ಅವರಿಗೆ ನಾಯಕಿಯಾಗಿ ರಚನಾ ಇಂದರ್ ನಟಿಸಿದ್ದು, ಮಿಕ್ಕಂತೆ ಸುಧಾರಾಣಿ, ರಚನಾ ಇಂದರ್, ಅಚ್ಯುತ್ ಕುಮಾರ್, ಮೂಗು ಸುರೇಶ್, ಶೀತಲ್ ಶೆಟ್ಟಿ ಮುಂತಾದವರು ನಟಿಸಿದ್ದಾರೆ. ಅಭಿಲಾಷ್ ಕಳತ್ತಿ ಅವರ ಛಾಯಾಗ್ರಹಣ, ಚರಣ್ ರಾಜ್ ಸಂಗೀತ ಮತ್ತು ರಘು ನಿಡುವಳ್ಳಿ ಅವರ ಸಂಭಾಷಣೆ ಈ ಚಿತ್ರಕ್ಕಿದೆ.