ಅಮರಾವತಿ: ವ್ಯಕ್ತಿಯೊಬ್ಬ ಪತ್ನಿ ಹಾಗೂ ತಾಯಿಯನ್ನು ಕತ್ತು ಹಿಸುಕಿ ಕೊಂದು ಬಳಿಕ ಇಬ್ಬರು ಮಕ್ಕಳೊಂದಿಗೆ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾದ ಘಟನೆ ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯ ವೆಂಕಟಕೃಷ್ಣಪಲೆಂನಲ್ಲಿ ನಡೆದಿದೆ.
ವೆಂಕಟಕೃಷ್ಣಪಲೆಂ ಪಂಚಾಯತ್ ವ್ಯಾಪ್ತಿಯ ನಿವಾಸಿ ಮೋಹನ್ ತನ್ನ ತಾಯಿ ಚಂದ್ರಕಲಾ ಹಾಗೂ ಪತ್ನಿ ಹರಿತಾ ಅವರನ್ನು ಮನೆಯಲ್ಲಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.
ಬಳಿಕ ಅಲ್ಲಿಂದ ಇಬ್ಬರು ಮಕ್ಕಳಾದ ಕೌಶಿಕ್ ಹಾಗೂ ಹರಿಣಿ ಓದುತ್ತಿದ್ದ ಶಾಲೆಗೆ ಹೋಗಿ ಮನೆಯಲ್ಲಿ ಕುಟುಂಬದ ಸದಸ್ಯರೊಬ್ಬರು ನಿಧನ ಹೊಂದಿದ್ದಾರೆ ಎಂದು ಮಕ್ಕಳನ್ನು ಕರೆದುಕೊಂಡು ಬಂದಿದ್ದ. ಆದರೆ ಆತ ಮನೆಗೆ ವಾಪಸ್ ಆಗಿರಲಿಲ್ಲ.
ಪೊಲೀಸರು ಹುಡುಕಾಟ ನಡೆಸಿದಾಗ ಮೋಹನ್ ಮಕ್ಕಳೊಂದಿಗೆ ಪುತ್ತೂರು ತಾಲ್ಲೂಕಿನ ವೇಪಗುಂಟ ಬಳಿಯ ರೈಲ್ವೆ ಹಳಿಯ ಮೇಲೆ ಮಲಗಿ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.





