ಸತೀಶ್ ನೀನಾಸಂ ಅಭಿನಯದ ‘ಅಶೋಕ ಬ್ಲೇಡ್’ ನಿರ್ದೇಶಕ ವಿನೋದ್ ಧೋಂಡಾಳೆ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಚಿತ್ರವು ನಿಂತಿದೆ ಎಂಬ ಸುದ್ದಿ ಕೇಳಿಬಂದಿತ್ತು. ಆದರೆ, ಚಿತ್ರವು ನಿಂತಿಲ್ಲ. ‘ಅಶೋಕ ಬ್ಲೇಡ್’ ಇದೀಗ ‘ದಿ ರೈಸ್ ಆಫ್ ಅಶೋಕ’ ಮುಂದುವರೆದು ಬಿಡುಗಡೆಯಾಗಲಿದೆ.
ಎರಡೂವರೆ ವರ್ಷಗಳ ಹಿಂದೆ ‘ಅಶೋಕ ಬ್ಲೇಡ್’ ಚಿತ್ರ ಪ್ರಾರಂಭವಾಗಿತ್ತು. ಮೊದಲು ಒಂದು ಚಿತ್ರ ಎಂದು ಶುರುವಾಗಿದ್ದು, ನಂತರ ಎರಡು ಭಾಗಗಳಲ್ಲಿ ಬಿಡುಗಡೆ ಎಂದು ಹೇಳಲಾಯ್ತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರ ಬಿಡುಗಡೆ ಆಗುತ್ತದೆ ಎಂಬ ಸುದ್ದಿಯೂ ಇತ್ತು. ಕಡಿಮೆ ಬಜೆಟ್‍ನಲ್ಲಿ ಶುರುವಾದ ಚಿತ್ರ, ಕೊನೆಗೆ ದೊಡ್ಡದಾಗುತ್ತಾ ಹೋಯಿತು. ಬಜೆಟ್ ಜಾಸ್ತಿಯಾದಂತೆ ಸಾಲ ಸಹ ಹೆಚ್ಚಿತು. ಇದೆಲ್ಲದರಿಂದ ವಿಚಲಿತಗೊಂಡ ನಿರ್ದೇಶಕ ಮತ್ತು ನಿರ್ಮಾಪಕರಲ್ಲೊಬ್ಬರಾದ ವಿನೋದ್ ಧೋಂಡಾಳೆ ಕಳೆದ ಜುಲೈನಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಇನ್ನು, ಚಿತ್ರ ಪ್ರಾರಂಭವಾಗುವುದಿಲ್ಲ ಎಂಬ ಮಾತುಗಳು ಹರಿದಾಡುತ್ತಿರುವಾಗಲೇ ಚಿತ್ರ ಪುನಃ ಶುರುವಾಗುತ್ತಿರುವ ಸುದ್ದಿ ಇದೆ.
ಈ ಕುರಿತು ಗುರುವಾರ ಅಧಿಕೃತ ಪ್ರಕಟಣೆ ಹೊರಬಿದ್ದಿದೆ. ಅಷ್ಟೇ ಅಲ್ಲ, ಚಿತ್ರದ ಮೋಷನ್ ಪೋಸ್ಟರ್ ಸಹ ಬಿಡುಗಡೆಯಾಗಿದೆ. ‘ಅಶೋಕ ಬ್ಲೇಡ್’ ಚಿತ್ರಕ್ಕೆ ‘ದಿ ರೈಸ್ ಆಫ್ ಅಶೋಕ’ ಎಂಬ ಹೆಸರನ್ನು ಇಡಲಾಗಿದ್ದು, ಈ ಶೀರ್ಷಿಕೆಯಲ್ಲೇ ಚಿತ್ರ ಬಿಡುಗಡೆಯಾಗಲಿದೆ. ನಿಧನಕ್ಕೂ ಮೊದಲು ವಿನೋದ್ ದೊಂಡಾಳೆ ಶೇ.80ರಷ್ಟು ಚಿತ್ರೀಕರಣ ಮುಗಿಸಿದ್ದರಂತೆ. ಬಾಕಿ ಇರುವ ಚಿತ್ರವನ್ನು ಮನು ಶೇಡ್ಗಾರ್ ಮುಂದುವರೆಸುತ್ತಿದ್ದಾರೆ. ‘ಚಮಕ್’, ‘ಕ್ಷೇತ್ರಪತಿ’, ‘ಅವತಾರ ಪುರುಷ’ ಸೇರಿದಂತೆ ಒಂದಷ್ಟು ಚಿತ್ರಗಳಿಗೆ ಸಂಕಲನಕಾರರಾಗಿ ಕೆಲಸ ಮಾಡಿರುವ ಮನು ಶೇಡ್ಗಾರ್, ‘ದಿ ರೈಸ್ ಆಫ್ ಅಶೋಕ’ ಚಿತ್ರಕ್ಕೂ ಸಂಕಲನಕಾರರಾಗಿ ಕೆಲಸ ಮಾಡುತ್ತಿದ್ದು, ಅವರಿಗೆ ಚಿತ್ರದ ಬಗ್ಗೆ ಸಂಪೂರ್ಣ ಮಾಹಿತಿ ಇರುವುದರಿಂದ, ಚಿತ್ರದ ಉಳಿದ ಭಾಗದ ದೃಶ್ಯಗಳನ್ನು ನಿರ್ದೇಶಿಸುವ ಜವಾಬ್ದಾರಿಯನ್ನು ಅವರಿಗೆ ಹೊರಿಸಲಾಗಿದೆ.
ಫೆಬ್ರವರಿ 15ರಿಂದ ‘ದಿ ರೈಸ್ ಆಫ್ ಅಶೋಕ’ ಚಿತ್ರದ ಚಿತ್ರೀಕರಣ ಮತ್ತೆ ಪ್ರಾರಂಭವಾಗಲಿದ್ದು, ಈ ಚಿತ್ರವು ಕನ್ನಡದ ಜೊತೆಗೆ ತಮಿಳು ಹಾಗೂ ತೆಲುಗಿನಲ್ಲಿ ತಯಾರಾಗುತ್ತಿದೆ. ವೃದ್ಧಿ ಕ್ರಿಯೇಷನ್ಸ್ ಹಾಗೂ ಸತೀಶ್ ಪಿಕ್ಚರ್ಸ್ ಹೌಸ್ ಬ್ಯಾನರ್ ನಡಿ ವರ್ಧನ್ ನರಹರಿ, ಜೈಷ್ಣವಿ ಮತ್ತು ನೀನಾಸಂ ಸತೀಶ್, ‘ರೈಸ್ ಆಫ್ ಅಶೋಕ’ ಚಿತ್ರವನ್ನು ಜೊತೆಯಾಗಿ ನಿರ್ಮಾಣ ಮಾಡುತ್ತಿದ್ದಾರೆ.
‘ದಿ ರೈಸ್ ಆಫ್ ಅಶೋಕ’ ಚಿತ್ರದಲ್ಲಿ ಸತೀಶ್ ನೀನಾಸಂ ಜೊತೆಗೆ ಬಿ. ಸುರೇಶ, ಅಚ್ಯುತ್ ಕುಮಾರ್, ಗೋಪಾಲಕೃಷ್ಣ ದೇಶಪಾಂಡೆ, ಸಂಪತ್ ಮೈತ್ರೀಯಾ, ಯಶ್ ಶೆಟ್ಟಿ ಮುಂತಾದವರು ಅಭಿನಯಿಸಿದ್ದಾರೆ. ಚಿತ್ರಕ್ಕೆ ಲವಿತ್ ಛಾಯಾಗ್ರಹಣ, ಪೂರ್ಣಚಂದ್ರ ತೇಜಸ್ವಿ ಸಂಗೀತವಿದೆ.