ಸಾಯುವುದಕ್ಕೆ ಮಾಡುವ ಧೈರ್ಯವನ್ನು ಬದಕುವುದಕ್ಕೆ ಮಾಡಿ ಎಂಬ ಸಂದೇಶ ಸಾರುವ ಸಾಯಿಪ್ರಕಾಶ್ ನಿರ್ದೇಶನದ 105ನೇ ಚಿತ್ರವಾದ ‘ಸೆಪ್ಟೆಂಬರ್ 10’ ಸದ್ಯದಲ್ಲೇ ಬಿಡುಗಡೆ ಆಗಲಿದೆ. ಅದಕ್ಕೂ ಮೊದಲು ಚಿತ್ರದ ಮೂರನೇ ಹಾಡನ್ನು ಇತ್ತೀಚೆಗೆ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣ ಗೌಡ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಪ್ರಿಯಾ ಹಾಸನ್ ಮುಂತಾದವರು ಹಾಜರಿದ್ದರು. ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆಯುವುದರ ಜೊತೆಗೆ ಸಂಗೀತವನ್ನೂ ಸಂಯೋಜಿಸಿದ್ದಾರೆ.
ಹಾಡು ಬಿಡುಗಡೆ ಮಾಡಿದ ನಾರಾಯಣ ಗೌಡ, ‘ಸಾಯಿಪ್ರಕಾಶ್ ೧೦೫ ಸಿನಿಮಾ ಮಾಡಿದ್ದಾರೆ. ಆದರೂ ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಿದ್ದಾರೆ. ಪ್ರಾಮಾಣಿಕವಾಗಿ ಕೆಲಸ ಮಾಡಿದಾಗ ಸಂಪತ್ತು ಉಳಿಯುವುದಿಲ್ಲ. ನಿಮ್ಮ ಜತೆ ನಾನು ಮತ್ತು ಕಾರ್ಯಕರ್ತರು ಇರುತ್ತೇವೆ, ಚಿತ್ರದ ಬಿಡುಗಡೆಗೆ ಸಹಾಯ ಮಾಡುತ್ತೇನೆ ಎಂದು ಅವರ ಜೊತೆಗೆ ನಾವು ನಿಂತಿದ್ದೇವೆ. ಸಸಾಯುವುದು ಸುಲಭವಲ್ಲ, ಅದೇ ಧೈರ್ಯವನ್ನು ಬದುಕೋಕೆ ಮಾಡಿ ಎಂಬ ಸಂದೇಶವನ್ನು ಈ ಚಿತ್ರದ ಮೂಲಕ ಹೇಳಿದ್ದಾರೆ. ಈ ಸಂದೇಶ ಎಲ್ಲರಿಗೂ ತಲುಪಬೇಕು. ಎಲ್ಲಾ ಜಿಲ್ಲೆಗಳ ನಮ್ಮ ಕಾರ್ಯಕರ್ತರು ಈ ಚಿತ್ರವನ್ನು ನೋಡುತ್ತಾರೆ. ರಕ್ಷಣಾ ವೇದಿಕೆ ಎಂದರೆ ಬರೀ ಬೀದೀಲಿ ನಿಂತು ಹೋರಾಡುವುದಲ್ಲ. ಕನ್ನಡ ಭಾಷೆ ಉಳಿಸುವ ಎಲ್ಲ ಪ್ರಕಾರಗಳಲ್ಲೂ ಹೋರಾಟ ನಡೆಸಬೇಕು’ ಎಂದರು.
ನಟಿ ಪ್ರಿಯಾ ಹಾಸನ್ ಮಾತನಾಡುತ್ತಾ, ‘ಈ ಸಿನಿಮಾದಲ್ಲಿ ನಿರ್ದೇಶಕರು ಏಳು ಕುಟುಂಬಗಳ ಕಥೆ ಹೇಳಿದ್ದಾರೆ. ನಮ್ಮ ಮನೆಯ ಸುತ್ತ ಮುತ್ತ ನಡೆವ ಕಥೆಯೇ ಇದರಲ್ಲಿದೆ. ವ್ಯವಸ್ಥೆ ಸರಿ ಹೋದರೆ ಮಾತ್ರವೇ ಪರಿಹಾರ ಸಿಗಲು ಸಾಧ್ಯ’ ಎಂದರು.
ಸಾಯಿಪ್ರಕಾಶ್ ಮಾತನಾಡಿ, ‘ಇವತ್ತು ಚಿತ್ರ ಬಿಡುಗಡೆ ಮಾಡೋದು ತುಂಬಾ ಕಷ್ಟ. ಇದು ನನ್ನ 105ನೇ ಚಿತ್ರ. ಇದರಲ್ಲಿ 96 ಕನ್ನಡ ಸಿನಿಮಾ ಮಾಡಿದ್ದೇನೆ. ೭೦% ಸಕ್ಸಸ್ ಕೊಟ್ಟಿದ್ದೇನೆ. ಕಷ್ಟದ ಸಮಯದಲ್ಲಿ ಯಾರೂ ಬಂದಿಲ್ಲ. ಇದು ನನಗೆ ಹತ್ತಿರವಾದ ಸಿನಿಮಾ ಅಂತ. ಸಿನಿಮಾ ನೋಡಿ ಮನೆಗೆ ಹೋದವರೂ ಯೋಚಿಸುತ್ತಾರೆ’ ಎಂದು ಹೇಳಿದರು.
ಶ್ರೀದೇವಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಶ್ರೀಮತಿ ರಾಜಮ್ಮ ಸಾಯಿಪ್ರಕಾಶ್ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಶಶಿಕುಮಾರ್, ರಮೇಶ್ ಭಟ್, ಶ್ರೀನಿವಾಸಮೂರ್ತಿ, ಶ್ರೀರಕ್ಷಾ, ಶಿವಕುಮಾರ್ ಮುಂತಾದವರು ನಟಿಸಿದ್ದು, ಜೆಜಿ. ಕೃಷ್ಣ ಛಾಯಾಗ್ರಹಣ ಈ ಚಿತ್ರಕ್ಕಿದೆ.




