‘ದುನಿಯಾ’ ವಿಜಯ್ ಮತ್ತು ಶ್ರೇಯಸ್ ಮಂಜು ‘ಮಾರುತ’ ಚಿತ್ರಕ್ಕೆ ಎಸ್.ನಾರಾಯಣ್ ಬರೆದಿರುವ ಪ್ರೇಮಗೀತೆಯೊಂದು ಕೆಲವು ದಿನಗಳ ಹಿಂದೆ ಬಿಡುಗಡೆಯಾಗಿತ್ತು. ಇದೀಗ ಅವರು ಅದೇ ಚಿತ್ರಕ್ಕಾಗಿ ಭಕ್ತಿಗೀತೆಯೊಂದನ್ನು ಬರೆದು ಸಂಯೋಜಿಸಿದ್ದು, ನವರಾತ್ರಿ ಸಂದರ್ಭದಲ್ಲಿ ಈ ಹಾಡು ಬಿಡುಗಡೆಯಾಗಿದೆ. ಅನನ್ಯ ಭಟ್ ಅವರ ಗಾಯನದಲ್ಲಿ ಮೂಡಿ ಬಂದಿರುವ ಈ ಹಾಡಿನಲ್ಲಿ ನಾಯಕಿ ಬೃಂದಾ ಆಚಾರ್ಯ ಅಭಿನಯಿಸಿದ್ದಾರೆ.
ಈ ಚಿತ್ರದ ಕುರಿತು ಮಾತನಾಡುವ ಎಸ್.ನಾರಾಯಣ್, ‘ಈ ಚಿತ್ರದಲ್ಲಿ ‘ದುನಿಯಾ’ ವಿಜಯ್ ಅಭಿನಯಿಸಿರುವುದರಿಂದ ಪರಿಪೂರ್ಣವಾಗಿದೆ. ಇವತ್ತಿನ ಯುವ ಪೀಳಿಗೆಯೇ ಈ ಚಿತ್ರದ ಕಥಾವಸ್ತು. ಇವತ್ತಿನ ಯುವಪೀಳಿಗೆ ನಾಲ್ಕು ವರ್ಗಗಳಿವೆ. ಮೊದಲನೆಯದು, ಸಂಸಾರದ ಬಗ್ಗೆ ಯೋಚಿಸುತ್ತದೆ. ಎರಡನೆಯದು, ತನ್ನ ಬುದ್ಧಿವಂತಿಕೆಯನ್ನು ದೇಶ ಕಟ್ಟುವುದಕ್ಕೆ ಉಪಯೋಗಿಸುತ್ತದೆ. ಮೂರನೆಯದು, ಯಾವುದೇ ಜವಾಬ್ದಾರಿ ಇಲ್ಲದೆ ತಂದೆಯ ದುಡ್ಡಿನಲ್ಲಿ ಬದುಕುವವರು. ನಾಲ್ಕನೆಯದು, ಸೋಷಿಯಲ್ ಮೀಡಿಯಾದಲ್ಲಿ ಅನಗತ್ಯ ಟೀಕೆಗಳನ್ನು ಮಾಡುತ್ತಾ ಕುಳಿತಿರುತ್ತದೆ. ಸಾಮಾಜಿಕ ಜಾಲತಾಣಗಳು ಎಷ್ಟು ಸದ್ಬಳಕೆಯಾಗುತ್ತಿದೆಯೋ, ಅಷ್ಟೇ ದುರ್ಬಳಕೆ ಆಗುತ್ತಿದೆ. ಸೋಷಿಯಲ್ ಮೀಡಿಯಾದಿಂದ ಇಂದು ಅನೇಕ ದುರ್ಘಟನೆಗಳಾಗುತ್ತಿವೆ. ಆ ವ್ಯೂಹದಲ್ಲಿ ಸಿಕ್ಕಿಬೀಳುವ ಪಾತ್ರಗಳು ಈ ಚಿತ್ರದಲ್ಲಿವೆ’ ಎಂದರು.
ಇದನ್ನೂ ಓದಿ:-41 ಕಾರ್ಯಕರ್ತರಿಗೆ ನ್ಯಾಯಾಂಗ ಬಂಧನ: ನಾಳೆ 31 ಜಿಲ್ಲೆಗಳಲ್ಲಿಯೂ ಕರವೇ ಪ್ರತಿಭಟನೆ
ನಿರ್ದೇಶಕ ಎಸ್ ನಾರಾಯಣ್ ಅವರ ಶಿಸ್ತು ಎಲ್ಲರಿಗೂ ಮಾದರಿ ಎಂದ ಶ್ರೇಯಸ್, ‘ನಾನು ಅವರಿಂದ ಈ ಚಿತ್ರದಲ್ಲಿ ಸಾಕಷ್ಟು ಕಲಿತಿದ್ದೇನೆ. ಇಂದು ಬಿಡುಗಡೆಯಾಗಿರುವ ಈ ಹಾಡು ತುಂಬಾ ಸುಮಧುರವಾಗಿದೆ. ನವರಾತ್ರಿಯ ಸಂದರ್ಭದಲ್ಲಿ ನಾಡಿನ ಜನತೆಗೆ ಒಂದೊಳ್ಳೆ ಭಕ್ತಿಗೀತೆಯನ್ನು ನಿರ್ದೇಶಕರು ನೀಡಿದ್ದಾರೆ. ಇಡೀ ತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಅಕ್ಟೋಬರ್.31ರಂದು ಚಿತ್ರ ತೆರೆಗೆ ಬರುತ್ತಿದೆ’ ಎಂದರು.
ಶಿಸ್ತು, ಸಂಯಮಕ್ಕೆ ಹೆಸರಾದವರು ನಿರ್ದೇಶಕ ಎಸ್. ನಾರಾಯಣ್ ಎಂದ ಬೃಂದಾ ಆಚಾರ್ಯ, ‘ನಮ್ಮಮ್ಮ …’ ಹಾಡನ್ನು ಎರಡು ದಿನಗಳ ಕಾಲ ಚಿತ್ರಿಸುವ ಯೋಜನೆಯಾಗಿತ್ತು. ಆದರೆ, ನಿರ್ದೇಶಕರು ಅವಧಿಗೂ ಮುನ್ನ ಚಿತ್ರೀಕರಣ ಮುಗಿಸಿದರು. ಈ ಹಾಡಿಗೆ ಸಾಕಷ್ಟು ರಿಹರ್ಸಲ್ ಮಾಡಿ ಕ್ಯಾಮೆರಾ ಎದುರಿಸಿದ್ದೇನೆ’ ಎಂದರು.
ಈಶ ಪ್ರೊಡಕ್ಷನ್ಸ್ ಲಾಂಛನದಲ್ಲಿ ಕೆ. ಮಂಜು ಮತ್ತು ರಮೇಶ್ ಯಾದವ್ ನಿರ್ಮಿಸಿರುವ ‘ಮಾರುತ’ ಚಿತ್ರಕ್ಕೆ ಎಸ್. ನಾರಾಯಣ್ ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆಯುವುದರ ಜೊತೆಗೆ ನಿರ್ದೇಶನ ಮಾಡಿ ಸಂಗೀತವನ್ನೂ ಸಂಯೋಜಿಸಿದ್ದಾರೆ. ಚಿತ್ರದಲ್ಲಿ ಶ್ರೇಯಸ್ ಮಂಜು, ಬೃಂದಾ ಆಚಾರ್ಯ, ತಾರಾ, ರಂಗಾಯಣ ರಘು, ಸಾಧು ಕೋಕಿಲ, ಕಲ್ಯಾಣಿ, ಶರತ್ ಲೋಹಿತಾಶ್ವ, ಪ್ರಮೋದ್ ಶೆಟ್ಟಿ, ಸುಜಯ್ ಶಾಸ್ತ್ರಿ ಮುಂತಾದವರ ಜೊತೆಗೆ ರವಿಚಂದ್ರನ್ ಸಹ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.





