ರಿಷಿ ಅಭಿನಯದ ‘ರುದ್ರ ಗರುಡ ಪುರಾಣ’ ಚಿತ್ರವು ಜ. 24ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅದಕ್ಕೂ ಮೊದಲು ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಗಿದೆ. ಧನಂಜಯ್ ಈ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದ್ದಾರೆ.
ಮೊದಲು ಮಾತನಾಡಿದ ಧನಂಜಯ್, ರಿಷಿ ನನ್ನ ಕಾಲೇಜು ಹಾಗೂ ರಂಗಭೂಮಿ ದಿನಗಳ ಗೆಳೆಯ. ನಿರ್ದೇಶಕರು ಬಹು ದಿನಗಳ ಪರಿಚಯ. ‘ರುದ್ರ ಗರುಡ ಪುರಾಣ’ ಟ್ರೇಲರ್ ವಿಭಿನ್ನವಾಗಿದೆ. ಚಿತ್ರ ಭರ್ಜರಿ ಯಶಸ್ಸು ಕಾಣಲಿ’ ಎಂದು ನಟ ಧನಂಜಯ ಹಾರೈಸಿದರು.
ಇನ್ನೂ ಹೆಚ್ಚುಹೆಚ್ಚು ಸಿನಿಮಾಗಳನ್ನು ಮಾಡಿ ಎಂದು ಹಲವರು ಹೇಳುತ್ತಾರೆ. ನನಗೆ ಹೆಚ್ಚು ಸಿನಿಮಾಗಳನ್ನು ಮಾಡದಿದ್ದರೂ ಪರವಾಗಿಲ್ಲ, ಮಾಡಿದ ಚಿತ್ರಗಳು ಚೆನ್ನಾಗಿರಬೇಕು. ಜನ ನೋಡಿದರೆ, ಚೆನ್ನಾಗಿದೆ ಎಂದು ಹೇಳಬೇಕು ಎಂಬಾಸೆ. ಈ ಚಿತ್ರದಲ್ಲಿ ಒಂದು ಅದ್ಭುತವಾದ ತಂಡ ಸಿಕ್ಕಿದೆ. ಈ ತರಹದ ತಂಡ ಸಿಗುವುದು ಕಡಿಮೆ. ನಿರ್ದೇಶಕರಿಗೆ ವಿಷನ್ ಇದೆ. ಯಾಕೆ ಈ ಸಿನಿಮಾ ಮಾಡುತ್ತಿದ್ದೇನೆ ಎಂಬ ಕ್ಲಾರಿಟಿ ಇದೆ. ಪ್ರತಿ ದೃಶ್ಯದ ಬಗ್ಗೆಯೂ ಅವರಿಗೆ ಕ್ಲಾರಿಟಿ ಇದೆ. ಚಿತ್ರ ಚೆನ್ನಾಗಿ ಮೂಡಿಬರುವುದಕ್ಕೆ ನಿರ್ಮಾಪಕರು ಕಾರಣ. ಏನು ಕೇಳಿದರೂ ಇನ್ನೂ ದೊಡ್ಡದಾಗಿ ಮಾಡೋಣ ಎಂದು ನಿರ್ಮಾಪಕರು ಹೇಳುತ್ತಿದ್ದರು. ಎಲ್ಲರೂ ತಮ್ಮ ಕೆಲಸವನ್ನು ಇನ್ನಷ್ಟು ಚೆನ್ನಾಗಿ ಹುಮ್ಮಸ್ಸಿನಿಂದ ಮಾಡಿದ್ದಾರೆ’ ಎಂದರು.
‘ಬ್ಯಾಡ್ ಮ್ಯಾನರ್ಸ್’ ಚಿತ್ರದ ಪ್ರಿಯಾಂಕಾ ಕುಮಾರ್ ಇಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ‘ನಾಯಕಿಯಾಗಿ ಇದು ಮೊದಲ ಚಿತ್ರ. ನನ್ನ ತಂದೆಗೆ ನಾನು ಚೆನ್ನಾಗಿ ಓದಬೇಕೆಂಬ ಆಸೆ. ನನಗೆ ಓದು ಹಾಗೂ ನಟನೆ ಎರಡು ಆಸೆ. ಓದಿನಲ್ಲೂ ನಮ್ಮ ತಂದೆ ಹೇಳಿದ ಹಾಗೆ ಕೇಳಿದ್ದೇನೆ. ಇದರಿಂದ ಅವರಿಗೂ ಖುಷಿಯಾಗಿದೆ. ಈ ಚಿತ್ರದ ಟ್ರೇಲರ್ ನೋಡಿ ನಮ್ಮ ತಂದೆ ಸಂತೋಷಪಟ್ಟಿದ್ದಾರೆ. ಜನರಿಗೂ ಚಿತ್ರ ಇಷ್ಟವಾಗಲಿದೆ’ ಎಂದರು.
‘ರುದ್ರ ಗರುಡ ಪುರಾಣ’ ಚಿತ್ರವನ್ನು ಅಶ್ವಿನಿ ಆರ್ಟ್ಸ್ ಲಾಂಛನದಲ್ಲಿ ಅಶ್ವಿನಿ ಲೋಹಿತ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಹಿರಿಯ ನಟ ವಿನೋದ್ ಆಳ್ವ, ‘ಸಿದ್ಲಿಂಗು’ ಶ್ರೀಧರ್, ಗಿರೀಶ್ ಶಿವಣ್ಣ, ಶಿವರಾಜ ಕೆ.ಆರ್ ಪೇಟೆ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಕೆಪಿ ಸಂಗೀತ ಸಂಯೋಜಿಸಿದ್ದು, ಸಂದೀಪ್ ಕುಮಾರ್ ಛಾಯಾಗ್ರಹಣವಿದೆ.