ನಟ-ನಿರ್ದೇಶಕ ರಿಷಬ್ ಶೆಟ್ಟಿ ಹುಟ್ಟುಹಬ್ಬಕ್ಕೆ ಹೊಂಬಾಳೆ ಫಿಲಂಸ್ ಉಡುಗೊರೆ ನೀಡಿದೆ. ‘ಕಾಂತಾರ ಚಾಪ್ಟರ್ 1’ ಚಿತ್ರವು ಅಕ್ಟೋಬರ್.2ರಂದು ವಿಶ್ವದಾದ್ಯಂತ ತೆರೆಗೆ ಬರಲಿದೆ. ಅದಕ್ಕೂ ಮೊದಲು ರಿಷಬ್ ಶೆಟ್ಟಿ ಜನ್ಮದಿನದ ಪ್ರಯುಕ್ತ ಚಿತ್ರದ ಹೊಸ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.
‘ದಂತಕಥೆಯ ಮುನ್ನುಡಿ … ಆ ನುಡಿಗೊಂದು ಪರಿಚಯ … ಮನದಾಳದ ಕಥೆಗೆ ಮತ್ತೊಮ್ಮೆ ಸ್ವಾಗತ’ ಎಂಬ ಕ್ಯಾಪ್ಷನ್ ಮೂಲಕ ‘ಕಾಂತಾರ ಚಾಪ್ಟರ್ 1’ ಚಿತ್ರದ ಹೊಸ ಲುಕ್ ಬಿಡುಗಡೆ ಮಾಡಿದೆ ಹೊಂಬಾಳೆ ಫಿಲಂಸ್. ಈ ಹೊಸ ಪೋಸ್ಟರ್‌ನಲ್ಲಿ ರಿಷಬ್ ಶೆಟ್ಟಿ ಹಿಂದೆಂದೂ ಕಾಣದ ಲುಕ್‌ನಲ್ಲಿ ಕಂಡಿದ್ದಾರೆ.
ಎಸ್.ಎಸ್. ರಾಜಮೌಳಿ ನಿರ್ದೇಶನನದ ‘RRR’ ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡಿದವರು ಟೊಡರ್ ಲ್ಯಾಜರೋವ್. ಇದೀಗ ‘ಕಾಂತಾರ’ ಚಿತ್ರಕ್ಕೂ ಸಾಹಸ ನಿರ್ದೇಶನ ಮಾಡಿದ್ದಾರೆ. ಆ ನಿಮಿತ್ತ ಬಲ್ಗೇರಿಯಾದಿಂದ ಕುಂದಾಪುರಕ್ಕೆ ಆಗಮಿಸಿದ್ದ ಅವರು ಈ ಚಿತ್ರಕ್ಕೆ ಎರಡು ಫೈಟ್‍ಗಳನ್ನು ನಿರ್ದೇಶಿಸಿದ್ದಾರಂತೆ.
‘ಕಾಂತಾರ: ಅಧ್ಯಾಯ 1’ ಚಿತ್ರವು ಆಧ್ಯಾತ್ಮ ಮತ್ತು ಸಾಹಸಗಾಥೆಯ ಸಮ್ಮಿಶ್ರಣದ ಸಿನಿಮಾ ಎಂದು ಹೇಳಲಾಗುತ್ತಿದೆ. ಈ ಚಿತ್ರಕ್ಕಾಗಿ ಕುಂದಾಪುರದಲ್ಲಿ ಬರೋಬ್ಬರಿ 25 ಎಕರೆ ಪ್ರದೇಶದಲ್ಲಿ ಬೃಹತ್ ಸೆಟ್ ಹಾಕಿ ಚಿತ್ರೀಕರಣ ಮಾಡಲಾಗಿದೆಯಂತೆ. ಕಾಲ್ಪನಿಕ ಊರೊಂದನ್ನು ನಿರ್ಮಿಸಿ, ಅಲ್ಲಿ ನೂರಾರು ದಿನಗಳ ಚಿತ್ರೀಕರಣ ಮಾಡಲಾಗಿದೆ. ಭಾರತೀಯ ಹಾಗೂ ಅಂತರರಾಷ್ಟ್ರೀಯ ತಂತ್ರಜ್ಞರೂ ಈ ಸಿನಿಮಾಕ್ಕೆ ಕೈ ಜೋಡಿಸಿದ್ದಾರೆ. 45 ರಿಂದ 50 ದಿನಗಳ ಕಾಲ ಸುಮಾರು 500 ತರಬೇತಿದಾರರು, 3000ಕ್ಕೂ ಹೆಚ್ಚು ಜೂನಿಯರ್ ಕಲಾವಿದರು ಈ ಸಿನಿಮಾದ ಶೂಟಿಂಗ್‌ನಲ್ಲಿ ಭಾಗವಹಿಸಿದ್ದಾರೆ ಎಂದು ಹೇಳಲಾಗುತ್ತಿದೆ.
‘ಕಾಂತಾರ – ಅಧ್ಯಾಯ 1’ ಚಿತ್ರವನ್ನು ಹೊಂಬಾಳೆ ಫಿಲಂಸ್‍ನ ವಿಜಯ್ ಕಿರಗಂದೂರು ನಿರ್ಮಿಸುತ್ತಿದ್ದು, ಚಿತ್ರದ ಚಿತ್ರೀಕರಣ ಕಳೆದ ವರ್ಷದಿಂದ ಸತತವಾಗಿ ಕುಂದಾಪುರದ ಸುತ್ತಮುತ್ತ ಭರದಿಂದಸಾಗುತ್ತಿದೆ. ಇದೊಂದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು ಕನ್ನಡದಲ್ಲಿ ನಿರ್ಮಾಣವಾಗಿ, ನಂತರ ತೆಲುಗು, ತಮಿಳು, ಹಿಂದಿ, ಮಲಯಾಳಂ ಸೇರಿದಂತೆ ಬೇರೆ ಭಾಷೆಗಳಿಗೆ ಡಬ್ ಆಗಿ ಬಿಡುಗಡೆಯಾಗಲಿದೆ.





