Mysore
25
scattered clouds
Light
Dark

ವರ್ಷಾಂತ್ಯಕ್ಕೆ ‘ರಿಚರ್ಡ್ ಆ್ಯಂಟೋನಿ’ ಪ್ರಾರಂಭ; ರಕ್ಷಿತ್‍ ಸ್ಪಷ್ಟನೆ

ರಕ್ಷಿತ್‍ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ರಿಚರ್ಡ್ ಆ್ಯಂಟೋನಿ’ ಯಾವಾಗ? ಇಂಥದ್ದೊಂದು ಪ್ರಶ್ನೆ ಒಂದು ವರ್ಷದಿಂದ ಕೇಳಿ ಬರುತ್ತಲೇ ಇದೆ. ಈ ಚಿತ್ರ ಘೋಷಣೆಯಾಗಿಯೇ ಮೂರು ವರ್ಷಗಳೇ ಆಗಿವೆ. ಆದರೆ, ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರಗಳಲ್ಲಿ ರಿಷಭ್‍ ಬ್ಯುಸಿ ಇದ್ದ ಕಾರಣ, ಚಿತ್ರ ಪ್ರಾರಂಭವಾಗಿರಲಿಲ್ಲ. ಈಗ ಆ ಚಿತ್ರಗಳು ಮುಗಿದೇ ಒಂದು ವರ್ಷವಾಗಿದೆ. ಆದರೆ, ಇನ್ನೂ ‘ರಿಚರ್ಡ್ ಆ್ಯಂಟೋನಿ’ ಬಗ್ಗೆ ಯಾವುದೇ ಸುದ್ದಿ ಇಲ್ಲ. ಇನ್ನು, ಚಿತ್ರ ಯಾವಾಗ ಶುರು ಎಂದು ಅಭಿಮಾನಿಗಳು ಕೇಳಿ ಕೇಳಿ ಸುಸ್ತಾಗಿದ್ದರು. ಈಗ ಕೊನೆಗೂ ಅದಕ್ಕೆ ಉತ್ತರ ಕೊಟ್ಟಿದ್ದಾರೆ.

ಗುರುವಾರ, ‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರದ ಟ್ರೇಲರ್‍ ಬಿಡುಗಡೆ ಸಮಾರಂಭದಲ್ಲಿ ಮಾಧ್ಯಮದವರ ಜೊತೆಗೆ ಮಾತನಾಡಿರುವ ಅವರು, ‘ರಿಚರ್ಡ್ ಆ್ಯಂಟೋನಿ’ ವರ್ಷಾಂತ್ತಕ್ಕೆ ಪ್ರಾರಂಭವಾಗಲಿದೆ ಎಂದು ಹೇಳಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ‘ಬಹಳಷ್ಟು ಜನ ಚಿತ್ರ ಯಾವಾಗ ಎಂದು ಕೇಳುತ್ತಿದ್ದಾರೆ. ಆದರೆ, ನನಗೆ ಅವಸರವಿಲ್ಲ. ದೊಡ್ಡ ಕನಸಿಗೆ ಸಮಯ ಜಾಸ್ತಿ ಬೇಕಾಗುತ್ತದೆ. ಸದ್ಯ ನಾನು ಸ್ಕ್ರಿಪ್‍ನಲ್ಲಿ ತೊಡಗಿಸಿಕೊಂಡಿದ್ದೇನೆ. ಬಹುತೇಕ ಮುಗಿದಿದೆ. ಈಗಾಗಲೇ ಒಮ್ಮೆ ದುಬೈಗೆ ಹೋಗಿ ಲೊಕೇಶನ್‍ ನೋಡಿಕೊಂಡು ಬಂದಿದ್ದೇನೆ. ಸೆಪ್ಟೆಂಬರ್‍ನಲ್ಲಿ ಅಮೇರಿಕಾಗೆ ಲೊಕೇಶನ್‍ ನೋಡುವುದಕ್ಕೆ ಹೋಗುತ್ತಿದ್ದೇನೆ. ಚಿತ್ರದಲ್ಲಿ ಸುಮಾರು 20 ನಿಮಿಷಗಳ ಕಾಲ ವಿದೇಶ ಭಾಗ ಬರುತ್ತದೆ. ಹಾಗಾಗಿ, ಅವೆರಡೂ ಕಡೆ ಚಿತ್ರೀಕರಣ ನಡೆಯಲಿದೆ’ ಎಂದರು.

ಬರೀ ‘ರಿಚರ್ಡ್ ಆ್ಯಂಟೋನಿ’ಯಷ್ಟೇ ಅಲ್ಲ, ಇನ್ನೂ ಎರಡು ಕಥೆಗಳು ತಮ್ಮೊಳಗೆ ರೆಡಿ ಇವೆ ಎನ್ನುವ ಅವರು, ‘ಸಾಮಾನ್ಯವಾಗಿ ನನ್ನ ಪ್ರತಿ ಚಿತ್ರದ ಸ್ಕ್ರಿಪ್ಟ್ ಕೆಲಸಕ್ಕೂ ಒಂದೂವರೆ ವರ್ಷ ಬೇಕು. ಈ ಬಾರಿ ಬರೀ ‘ರಿಚರ್ಡ್ ಆ್ಯಂಟೋನಿ’ ಅಷ್ಟೇ ಅಲ್ಲ, ‘ಮಿಡ್‍ವೇ ಟು ಮೋಕ್ಷ’ ಮತ್ತು ‘ಪುಣ್ಯಕೋಟಿ 1 ಮತ್ತು 2’ ಚಿತ್ರಗಳ ಚಿತ್ರಕಥೆಯನ್ನೂ ಜೊತೆಗೆ ಬರೆಯುತ್ತಿದ್ದೇನೆ. ಆ ಮೂರೂ ಕಥೆಗಳು ನನ್ನೊಳಗೆ ರೆಡಿ ಇವೆ. ಈ ಎಲ್ಲಾ ಚಿತ್ರಗಳು ಒಂದರಹಿಂದೊಂದು ಬರಲಿವೆ. ಮೊದಲಿಗೆ ಈ ವರ್ಷಾಂತ್ಯಕ್ಕೆ ‘ರಿಚರ್ಡ್ ಆ್ಯಂಟೋನಿ’ ಶುರು ಆಗಲಿದೆ. ಮುಂದಿನ ವರ್ಷದ ಕೊನೆಗೆ ಆ ಚಿತ್ರ ಬಿಡುಗಡೆ ಆಗಲಿದೆ. ಅದು ತಪ್ಪಿದರೂ, 2026ರಕ್ಕೆ ನನ್ನ ಎರಡು ಸಿನಿಮಾಗಳು ಬರುವುದು ಖಂಡಿತಾ, ‘ರಿಚರ್ಡ್ ಆ್ಯಂಟೋನಿ’ ಚಿತ್ರೀಕರಣ ಮುಗಿಯುತ್ತಿದ್ದಂತೆಯೇ, ‘ಮಿಡ್ವೇ ಟು ಮೋಕ್ಷ’ ಪ್ರಾರಂಭವಾಗಲಿದೆ’ ಎಂದರು ರಕ್ಷಿತ್.

ಇನ್ನು, ಈ ಚಿತ್ರವನ್ನು ಯಾರು ನಿರ್ಮಿಸುತ್ತಾರೆ ಎಂಬ ಪ್ರಶ್ನೆಗೆ ಅವರು ಉತ್ತರಿಸುವುದಿಲ್ಲ. ಈ ಹಿಂದೆ ಹೊಂಬಾಳೆ ಫಿಲಂಸ್‍ ಸಂಸ್ಥೆಯು ಚಿತ್ರವನ್ನು ನಿರ್ಮಿಸುತ್ತಿರುವುದಾಗಿ ಘೋಷಿಸಿತ್ತು. ಆದರೆ, ಇದೀಗ ನಿರ್ಮಾಣದಿಂದ ಹೊಂಬಾಳೆ ಫಿಲಂಸ್‍ ಹಿಂದೆ ಸರಿದಿದೆ ಎಂಬ ಗುಸುಗುಸ ಇದೆ. ಈ ಕುರಿತು ಹೊಂಬಾಳೆಯ ವಿಜಯ್‍ ಕಿರಗಂದೂರು ಆಗಲೀ, ರಕ್ಷಿತ್‍ ಆಗಲೀ ಇದುವರೆಗೂ ಸ್ಪಷ್ಟನೆ ನೀಡಿಲ್ಲ.

‘ರಿಚರ್ಡ್ ಆ್ಯಂಟೋನಿ’ ಚಿತ್ರದಲ್ಲಿ ಬಹಳಷ್ಟು ಸ್ಥಳೀಯ ಪ್ರತಿಭೆಗಳೇ ಇರುತ್ತಾರೆ ಎಂದು ಅವರು ಈ ಹಿಂದೆಯೇ ಹೇಳಿದ್ದರು. ‘ಬಹಳಷ್ಟು ಜನ ಸ್ಥಳೀಯ ಪ್ರತಿಭೆಗಳಿರುತ್ತಾರೆ. ಚಿತ್ರದಲ್ಲಿ ಉಡುಪಿಯ ಸೊಗಡು ಇರುತ್ತದೆ. ಇಲ್ಲಿನ ಸೊಗಡ ಬಗ್ಗೆ ಗೊತ್ತಿಲ್ಲದವರು ಮಾತಾಡಿದರೆ ಅನುಕರಣೆ ಮಾಡಿದಂತಾಗುತ್ತದೆ. ಹಾಗಾಗಿ, ಪ್ರತಿಯೊಬ್ಬ ಕಲಾವಿದರೂ ಉಡುಪಿಯವರೇ ಆಗಿರುತ್ತಾರೆ’ ಎಂದು ರಕ್ಷಿತ್‍ ಹೇಳಿದ್ದರು.