ಗೋಣಿಕೊಪ್ಪ: ಪೊನ್ನಂಪೇಟೆ ಪಟ್ಟಣದಲ್ಲಿ ಭಾರಿ ಗಾಳಿ-ಮಳೆಯ ನಡುವೆ ಚಲಿಸುತ್ತಿದ್ದ ಜೀಪಿನ ಮೇಲೆ ಮರದ ಬೃಹತ್ ಕೊಂಬೆಯೊಂದು ಮುರಿದು ಬಿದ್ದ ಪರಿಣಾಮ ವಾಹನ ಜಖಂಗೊಂಡಿದ್ದು, ವಾಹನದಲ್ಲಿದ್ದವರು ಅದೃಷ್ಟವಶಾತ್ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.
ಪಟ್ಟಣದ ಜೂನಿಯರ್ ಕಾಲೇಜು ಸಮೀಪದ ನ್ಯಾಯಾಲಯ ಸಂಪರ್ಕ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಜೋಡುಬೀಟಿ ನಿವಾಸಿಯೊಬ್ಬರು ತಮ್ಮ ಜೀಪಿನಲ್ಲಿ ಸಂಚರಿಸುತ್ತಿದ್ದ ವೇಳೆ, ಜೂನಿಯರ್ ಕಾಲೇಜು ಆವರಣದಲ್ಲಿದ್ದ ಒಣಗಿದ ಮರದ ಕೊಂಬೆ ಗಾಳಿ-ಮಳೆಗೆ ಏಕಾಏಕಿ ಮುರಿದು ವಾಹನದ ಮೇಲೆ ಬಿದ್ದಿದೆ. ಪರಿಣಾಮ ಜೀಪಿನ ಮುಂಭಾಗದ ಗಾಜು ಸಂಪೂರ್ಣ ಪುಡಿಯಾಗಿದ್ದು, ವಾಹನಕ್ಕೆ ಹಾನಿಯಾಗಿದೆ.
ಘಟನೆಯ ವೇಳೆ ಕೊಂಬೆ ನೇರವಾಗಿ ವಾಹನದ ಕ್ಯಾಬಿನ್ ಮೇಲೆ ಬಿದ್ದಿದ್ದರೂ, ಚಾಲಕ ಹಾಗೂ ಇತರ ಪ್ರಯಾಣಿಕರು ಯಾವುದೇ ಅಪಾಯವಿಲ್ಲದೆ ಪಾರಾಗಿರುವುದು ನೆರೆದಿದ್ದವರಲ್ಲಿ ನಿಟ್ಟುಸಿರು ಬಿಡುವಂತಾಗಿದೆ.
ಘಟನೆ ನಡೆದಿರುವ ರಸ್ತೆ ನ್ಯಾಯಾಲಯ, ಜೂನಿಯರ್ ಕಾಲೇಜು ಹಾಗೂ ಟರ್ಫ್ ಮೈದಾನಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದ್ದು, ಪ್ರತಿನಿತ್ಯ ನೂರಾರು ಜನರು ಈ ಮಾರ್ಗದಲ್ಲಿ ಸಂಚರಿಸುತ್ತಾರೆ. ಆದ್ದರಿಂದ ಅಪಾಯಕಾರಿ ಸ್ಥಿತಿಯಲ್ಲಿರುವ ಮರಗಳು ಮತ್ತು ಒಣ ಕೊಂಬೆಗಳನ್ನು ಕೂಡಲೇ ತೆರವುಗೊಳಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.




