Mysore
25
broken clouds
Light
Dark

ಬಿಗಿ ಭದ್ರತೆಯೊಂದಿಗೆ ಬಳ್ಳಾರಿ ಜೈಲಿಗೆ ಶಿಫ್ಟ್‌ ಆದ ನಟ ದರ್ಶನ್‌

ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ನಟ ದರ್ಶನ್‌ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್‌ ಮಾಡಲಾಗಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿರುವ ನಟ ದರ್ಶನ್‌, ಕಳೆದ ಎರಡು ತಿಂಗಳಿನಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದರು.

ಹೀಗಿರುವಾಗಲೇ ನಟ ದರ್ಶನ್‌ಗೆ ಜೈಲಿನಲ್ಲಿ ರಾಜಾತಿಥ್ಯ ನೀಡುತ್ತಿದ್ದ ಬಗ್ಗೆ ಫೋಟೋವೊಂದು ಬಿಡುಗಡೆಯಾಗಿತ್ತು. ಇದರಿಂದ ರೊಚ್ಚಿಗೆದ್ದ ರಾಜ್ಯ ಸರ್ಕಾರ ಹಲವು ಅಧಿಕಾರಿಗಳು ಅಮಾನತು ಮಾಡಿ ಆದೇಶವನ್ನು ಸಹ ನೀಡಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ದರ್ಶನ್‌ರನ್ನು ಬಳ್ಳಾರಿ ಜೈಲಿಗೆ ಶಿಫ್ಟ್‌ ಮಾಡುವಂತೆ ಆದೇಶ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿಂದು ನಟ ದರ್ಶನ್‌ರನ್ನು ಚಿಕ್ಕಬಳ್ಳಾಪುರ, ಬಾಗೆಪಲ್ಲಿ, ಅನಂತಪುರ ಮಾರ್ಗವಾಗಿ ಬಳ್ಳಾರಿಗೆ ಶಿಫ್ಟ್‌ ಮಾಡಲಾಗಿದೆ. ಎಸಿಪಿ ಭರತ್‌ ರೆಡ್ಡಿ ನೇತೃತ್ವದಲ್ಲಿ ಮೂರು ಪೊಲೀಸ್‌ ವಾಹನಗಳ ಭದ್ರತೆಯಲ್ಲಿ ದರ್ಶನ್‌ ಅವರನ್ನು ಬಳ್ಳಾರಿಗೆ ಶಿಫ್ಟ್‌ ಮಾಡಲಾಗಿದೆ.

ಬೆಳಿಗ್ಗೆ 4 ಗಂಟೆಗೆ ಪರಪ್ಪನ ಅಗ್ರಹಾರದಿಂದ ಹೊರಟ ವಾಹನ ಚಿಕ್ಕಬಳ್ಳಾಪುರ ಮಾರ್ಗವಾಗಿ ಬಳ್ಳಾರಿಗೆ ತಲುಪಿತು. ಟೀ ಶರ್ಟ್‌, ಜೀನ್ಸ್‌, ಬೆಡ್‌ಶೀಟ್‌ ಹಿಡಿದುಕೊಂಡು ದರ್ಶನ್‌ ಬಳ್ಳಾರಿ ಜೈಲು ಪ್ರವೇಶಿಸಿದರು.

ಈ ವೇಳೆ ಜೈಲು ಅಧಿಕಾರಿಗಳು ದರ್ಶನ್‌ ಕತ್ತಿನಲ್ಲಿದ್ದ ದಾರ, ಕೈಯಲ್ಲಿದ್ದ ಖಡ್ಗವನ್ನು ಬಿಚ್ಚಿಸಿದರು. ಬಳಿಕ ದರ್ಶನ್‌ ಅವರ ವಿಚಾರಣಾಧೀನ ಖೈದಿ ನಂಬರ್‌ನ್ನು ಚೇಂಜ್‌ ಮಾಡಲಾಗಿದ್ದು, ದರ್ಶನ್‌ಗೆ 511 ನಂಬರ್‌ ನೀಡಿ, ವಿಶೇಷ ಸೆಲ್‌ಗೆ ಕಳುಹಿಸಲಾಯಿತು.