ಬೆಂಗಳೂರು : ಶಿವರಾಜಕುಮಾರ್, ಉಪೇಂದ್ರ ಮತ್ತು ರಾಜ್. ಬಿ ಶೆಟ್ಟಿ ಚಿತ್ರವು ಆಗಸ್ಟ್ 15ರಂದು ಬಿಡುಗಡೆ ಆಗಬೇಕಿತ್ತು. ಆದರೆ, ಗ್ರಾಫಿಕ್ಸ್ ಕೆಲಸಗಳು ನಿಧಾನವಾದ್ದರಿಂದ ಚಿತ್ರ ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಯ್ತು.
ಆದರೆ, ಚಿತ್ರವು ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ. ಈ ವಿಷಯನ್ನು ಚಿತ್ರಕ್ಕೆ ಗ್ರಾಫಿಕ್ಸ್ ಕೆಲಸ ಮಾಡುತ್ತಿರುವ VFX ತಂತ್ರಜ್ಞ ಯಶ್ ಗೌಡ ಅಧಿಕೃತವಾಗಿ ಹೇಳಿದ್ದಾರೆ. ಕೆನಡಾದ ಪ್ರತಿಷ್ಠಿತ MARZ ಸಂಸ್ಥೆ ಈ ಚಿತ್ರಕ್ಕೆ VFX ಕಾರ್ಯ ನಿರ್ವಹಿಸುತ್ತಿದ್ದು, ಈ ಸಂಸ್ಥೆ VFX ಮಾಡುತ್ತಿರುವ ಮೊದಲ ಕನ್ನಡ ಚಿತ್ರವಿದು. ಈ ಚಿತ್ರಕ್ಕೆ ಹಾಲಿವುಡ್‍ನ ಖ್ಯಾತ ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ.
ಈ ಚಿತ್ರದಲ್ಲಿ ಗ್ರಾಫಿಕ್ಸ್ ಮಹತ್ವದ ಪಾತ್ರ ವಹಿಸಲಿದ್ದು, ಹೆಚ್ಚು ಸಮಯ ತೆಗೆದುಕೊಳ್ಳುತ್ತಿರುವುದರಿಂದ ಈ ಚಿತ್ರ ಅಂದುಕೊಂಡಂತೆ ಆಗಸ್ಟ್.15ರಂದು ಬಿಡುಗಡೆಯಾಗಲಿಲ್ಲ. ಆಗಸ್ಟ್ ಬದಲು ಸೆಪ್ಟೆಂಬರ್ ತಿಂಗಳಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಇದೀಗ ಸೆಪ್ಟೆಂಬರ್ ತಿಂಗಳಲ್ಲೂ ಚಿತ್ರ ಬಿಡುಗಡೆ ಆಗುವುದು ಸಂಶಯವಾಗಿದೆ. ಕಾರಣ, ಚಿತ್ರದ ಗ್ರಾಫಿಕ್ಸ್ ಕೆಲಸ ಇನ್ನೂ ನಡೆಯುತ್ತಿದ್ದು, ಇದರಿಂದ ಚಿತ್ರದ ಬಿಡುಗಡೆ ವಿಳಂಬವಾಗಲಿದೆ. ಸೆಪ್ಟೆಂಬರ್ 16ರೊಳಗೆ VFX ಕಾರ್ಯ ಮುಕ್ತಾಯವಾಗಲಿದ್ದು. ಆನಂತರ ಇನ್ನೊಂದು ತಿಂಗಳು ಕೆಲವು ಕೆಲಸಗಳಿರುತ್ತವಂತೆ.
ಅಕ್ಟೋಬರ್.16ರ ಹೊತ್ತಿಗೆ ಕೆಲಸಗಳು ಮುಗಿಯಲಿವೆ ಎಂದು ಯಶ್ ಗೌಡ ಹೇಳಿದ್ದಾರೆ. ಬಹುಶಃ ನವೆಂಬ್ ತಿಂಗಳಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ. ಸದ್ಯದಲ್ಲೇ ಅಧಿಕೃತ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಿಸುವ ಸಾಧ್ಯತೆ ಇದೆ. ಸೂರಜ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ರಮೇಶ್ ರೆಡ್ಡಿ ನಿರ್ಮಾಣದ ‘45’ ಚಿತ್ರದಲ್ಲಿ ಶಿವರಾಜಕುಮಾರ್, ಉಪೇಂದ್ರ, ರಾಜ್ ಬಿ. ಶೆಟ್ಟಿ ಜೊತೆಗೆ ಕೌಸ್ತುಭ ಮಣಿ ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಮತ್ತು ಸತ್ಯ ಹೆಗಡೆ ಛಾಯಾಗ್ರಹಣವಿದೆ.





