‘ಭೈರಾದೇವಿ’ ಚಿತ್ರದ ಬಿಡುಗಡೆಗೆ ಎದುರು ನೋಡುತ್ತಿರುವ ರಮೇಶ್‍ಗೆ ‘ಆಪ್ತಮಿತ್ರ’ ಚಿತ್ರ ಪದೇಪದೇ ನೆನಪಗಾಗುತ್ತಿದೆ. ಅದಕ್ಕೆ ಕಾರಣವೂ ಇದೆ. ಆ ಕಾರಣವನ್ನು ರಮೇಶ್ ಇತ್ತೀಚೆಗೆ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಹೇಳಿಕೊಂಡಿದ್ದಾರೆ.
ಈ ಕುರಿತು ಮಾತನಾಡಿರವ ರಮೇಶ್ ಅರವಿಂದ್, ‘ಕಾಳಿ ಮೇಕಪ್‍ನಲ್ಲಿ ರಾಧಿಕಾ ಅವರನ್ನು ನೋಡಿದಾಗ, ‘ಮೇಡಂ ದಯವಿಟ್ಟು ಮೇಕಪ್ ತೆಗೆದು ಬನ್ನಿ ಎಂದು ಹೇಳಿದೆ. ‘ಆಪ್ತಮಿತ್ರ’ ಚಿತ್ರದಲ್ಲೂ ಸೌಂದರ್ಯ ಅವರಿಗೂ ಇದೇ ಹೇಳಿದ್ದೆ. ಕ್ಲೈಮ್ಯಾಕ್ಸ್ನಲ್ಲಿ ನಾಗವಲ್ಲಿ ಭಾಗದ ಚಿತ್ರೀಕರಣ ಮುಗಿಸಿ ಬಂದಾಗ, ಸೌಂದರ್ಯ ಅವರನ್ನು ನೋಡೋಕೆ ಭಯವಾಗುತ್ತಿತ್ತು. ಮೇಕಪ್ ತೆಗೆದು ಬನ್ನಿ ಆಮೇಲೆ ಮಾತಾಡೋಣ ಎಂದು ಹೇಳಿದ್ದೆ. ಆ ತರಹದ ಒಂದು ಶಕ್ತಿ ಕೆಲವು ಪಾತ್ರಗಳಿಗೆ ಇರುತ್ತದೆ’ ಎಂದರು.
ಈ ಚಿತ್ರದಲ್ಲಿನ ತಮ್ಮ ಪಾತ್ರದ ಕುರಿತು ಮಾತನಾಡುವ ಅವರು, ‘ಈ ಚಿತ್ರದಲ್ಲಿ ನಾನು ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಈ ಚಿತ್ರದಲ್ಲಿ ಅವನು ಬೇರೆ ಲೋಕದಿಂದ ಬಂದ ಒಂದು ಶಕ್ತಿಯ ವಿರುದ್ಧ ಹೋರಾಡಬೇಕು. ಆಗ ಆ ಪೊಲೀಸ್ ಅಧಿಕಾರಿ ಏನು ಮಾಡುತ್ತಾನೆ ಎನ್ನುವುದು ಕಥೆ. ‘ಆಪ್ತಮಿತ್ರ’ ಚಿತ್ರದಲ್ಲಿ ನಮ್ಮ ಮನೆಯಲ್ಲೊಂದು ಸಮಸ್ಯೆ ಇರುತ್ತದೆ. ಆಗ ಅವಿನಾಶ್ ಅವರು ಬಂದು ಇಲ್ಲಿ ಏನೋ ಸಮಸ್ಯೆ ಇದೆ ಎಂದು ಹೇಳುತ್ತಾರೆ. ಅದೇ ರೀತಿ, ಈ ಚಿತ್ರದಲ್ಲಿ ಇನ್ನೊಂದು ಸಮಸ್ಯೆ ಎದುರಿಸುತ್ತಿರುತ್ತೇನೆ. ಅದನ್ನು ಪರಿಹರಿಸೋಕೆ ‘ಭೈರಾದೇವಿ’ ಬರುತ್ತಾರಾ, ಇಲ್ಲವೋ’ ಎಂಬುದೇ ಕಥೆ ಎಂದರು ರಮೇಶ್.
ಈ ಚಿತ್ರ ಇರೋದೇ ಸಾವಿನ ನಂತರ ಏನಾದರೂ ಇದೆಯಾ? ಎಂಬ ಕುತೂಹಲದ ಸುತ್ತ ಎನ್ನುವ ಅವರು, ‘ಒಂದು ವೇಳೆ ಸಾವಿನ ನಂತರ ಯಾರಾದರೂ ಮತ್ತೆ ಬಂದರೆ ಏನಾಗುತ್ತದೆ? ಎಂಬ ವಿಷಯದ ಬಗ್ಗೆ ಹೇಳುವ ಪ್ರಯತ್ನ ಮಾಡಲಾಗಿದೆ. ಈ ಚಿತ್ರಕ್ಕಾಗಿ ಶಾಂತಿನಗರದ ಸ್ಮಶಾನದಲ್ಲಿ ರಾತ್ರಿ ಚಿತ್ರೀಕರಣ ಮಾಡುತ್ತಿದ್ದೆವು. ಒಂದು ರಾತ್ರಿ ಒಬ್ಬರು ಲೇಡಿ ಕಾನ್ಸಟಬಲ್ ಬಂದರು. ನನ್ನ ಹತ್ತಿರ ಬಂದು ಒಂದು ಸೆಲ್ಫಿ ಬೇಕು ಎಂದರು. ‘ಮೂರು ವರ್ಷಗಳಿಂದ ಇಲ್ಲಿ ಕೆಲಸ ಮಾಡುತ್ತಿದ್ದೇನೆ. ಒಂದು ದಿನ ಒಳಗೆ ಬಂದಿರಲಿಲ್ಲ. ಪೊಲೀಸರೇ ಹಾಗೆ ಹೇಳುವಾಗ, ಚಿತ್ರತಂಡ ಅಲ್ಲಿ 10 ದಿನಗಳ ಕಾಲ ಚಿತ್ರೀಕರಣ ಮಾಡಿದೆ. ಹಗಲು-ರಾತ್ರಿ, ಹೀರೋ-ವಿಲನ್, ಹುಟ್ಟು-ಸಾವು ತರಹ ದಿವ್ಯಶಕ್ತಿ ಮತ್ತು ದುಷ್ಟಶಕ್ತಿ ಸಹ ಒಂದುದು ವೈರುಧ್ಯ. ಅವೆರಡೂ ಸವಾಲು ಹಾಕಿಕೊಂಡರೆ ಏನಾಗುತ್ತದೆ ಎನ್ನುವ ಚಿತ್ರವೇ ‘ಭೈರಾದೇವಿ’’ ಎಂದರು.