ಕೆಲವು ದಿನಗಳ ಹಿಂದಷ್ಟೇ ರಕ್ಷಿತ್ ತೀರ್ಥಹಳ್ಳಿ ನಿರ್ದೇಶನದ ‘ತಿಮ್ಮನ ಮೊಟ್ಟೆಗಳು’ ಚಿತ್ರ ಬಿಡುಗಡೆಯಾಗಿತ್ತು. ಈ ಚಿತ್ರಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆಯೂ ವ್ಯಕ್ತವಾಗಿತ್ತು. ಆದರೆ, ಚಿತ್ರ ದೊಡ್ಡ ಸದ್ದು ಮಾಡಲಿಲ್ಲ. ಹೀಗಿರುವಾಗಲೇ, ಆ ಚಿತ್ರವನ್ನು ಶ್ರೀಕೃಷ್ಣ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದ ಆದರ್ಶ್ ಅಯ್ಯಂಗಾರ್, ರಕ್ಷಿತ್ ನಿರ್ದೇಶನದಲ್ಲಿ ಇನ್ನೊಂದು ಚಿತ್ರವನ್ನು ಸದ್ದಿಲ್ಲದೆ ನಿರ್ಮಿಸಿದ್ದಾರೆ. ಈ ಚಿತ್ರದ ಚಿತ್ರೀಕರಣ ಸದ್ದಿಲ್ಲದೆ ಮುಗಿದಿದ್ದು, ಇತ್ತೀಚೆಗೆ ಟೀಸರ್ ಸಹ ಬಿಡುಗಡೆಯಾಗಿದೆ.
ರಕ್ಷಿತ್ ನಿರ್ದೇಶನದ ಈ ಹಿಂದಿನ ಚಿತ್ರಗಳು ಒಂದಲ್ಲ ಒಂದು ಸಾಮಾಜಿಕ ಸಮಸ್ಯೆಗಳ ಸುತ್ತ ಸುತ್ತುತ್ತಿದ್ದವು. ಈ ಬಾರಿ, ಅವರು ‘ಮೋಡ, ಮಳೆ ಮತ್ತು ಶೈಲ’ಳ ಕಥೆಯನ್ನು ಹೇಳುವುದಕ್ಕೆ ಹೊರಟಿದ್ದಾರೆ. ಇದೊಂದು ಮಹಿಳಾ ಪ್ರಧಾನ ಚಿತ್ರವಾಗಿದ್ದು, ಮುಖ್ಯ ಪಾತ್ರದಲ್ಲಿ ಅಕ್ಷತ ಪಾಂಡವಪುರ ನಟಿಸಿದ್ದಾರೆ. ಗೋಪಾಲಕೃಷ್ಣ ದೇಶಪಾಂಡೆ, ಸಂಪತ್ ಮೈತ್ರೇಯ, ಉತ್ಪಲ್ ಗೌಡ, ರಾಘು ರಾಮನಕೊಪ್ಪ, ಬಲರಾಜ್ ವಾಡಿ, ಅಶ್ವಿನ್ ಹಾಸನ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಇದನ್ನು ಓದಿ : ‘ಕುಂಟೆಬಿಲ್ಲೆ’ ಆಡಲು ಬಂದ ಮೇಘಶ್ರೀ; ಸೆ. 26ಕ್ಕೆ ಚಿತ್ರ ಬಿಡುಗಡೆ
ಈ ಚಿತ್ರದ ಕುರಿತು ಮಾತನಾಡುವ ರಕ್ಷಿತ್, ‘ಸದ್ಯ ನಮ್ಮ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿ ಪೋಸ್ಟ್ ಪ್ರೊಡಕ್ಷನ್ ಕೊನೆಯ ಹಂತದಲ್ಲಿದೆ. ಆದರ್ಶ ಅಯ್ಯಂಗಾರ್ ಅವರಿಗೆ ಕಥೆ ಹೇಳಿದಾಗ ಅವರಿಗೆ ಇಷ್ಟವಾಗಿ, ಈ ಚಿತ್ರ ನಿರ್ಮಿಸುವುದಕ್ಕೆ ಮುಂದೆ ಬಂದಿದ್ದಾರೆ. ಈ ಚಿತ್ರವನ್ನು ಸಂಪೂರ್ಣ ಮಳೆಯಲ್ಲಿಯೇ ಮತ್ತು ಸಿಂಕ್ ಸೌಂಡ್‍ನಲ್ಲೇ ಚಿತ್ರೀಕರಣ ಮಾಡಲಾಗಿದೆ. ಈ ಮೊದಲಿನ ಮೂರು ಚಿತ್ರಗಳನ್ನು ವಿಷಯಗಳ ಮೇಲೆ ಮಾಡಿದ್ದೆ. ಈಗ ಶೈಲಳ ಕಥೆ ಹೇಳಲು ಹೊರಟಿದ್ದೇನೆ. ಇದೊಂದು ಡ್ರಾಮಾ ಥ್ರಿಲ್ಲರ್ ಶೈಲಿಯ ಚಿತ್ರ. ತೀರ್ಥಹಳ್ಳಿ, ಕುಂದಾಪುರ ಗಡಿಭಾಗಗಳ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ನಾನು 2012-13ರ ಕಾಲಘಟ್ಟದಲ್ಲಿ ನೋಡಿದ ಹಾಗೂ ಕೇಳಿದ ಒಂದಿಷ್ಟು ವಿಷಯ ಇಟ್ಟುಕೊಂಡು ಈ ಸಿನಿಮಾ ಮಾಡಿದ್ದೇನೆ’ ಎಂದು ಹೇಳಿದರು.
ಇದನ್ನು ಓದಿ : ಸಿನಿಪ್ರಿಯರಿಗೆ ಶಾಕ್: ಸಿನಿಮಾ ಟಿಕೆಟ್ ದರ 200ರೂ ನಿಗದಿಗೆ ಹೈಕೋರ್ಟ್ ತಡೆಯಾಜ್ಞೆ
ನಂತರ ಚಿತ್ರದ ಪ್ರಮುಖ ಪಾತ್ರಧಾರಿ ಅಕ್ಷತ ಪಾಂಡವಪುರ ಮಾತನಾಡಿ, ‘ನಾನಿಲ್ಲಿ ಶೈಲಳ ಪಾತ್ರ ಮಾಡಿದ್ದೇನೆ. ಇಂತಹ ಸಿನಿಮಾ ನನ್ನ ವೃತ್ತಿಜೀವನದಲ್ಲಿ ಸಿಗುತ್ತದೋ ಇಲ್ಲವೋ ಗೊತ್ತಿಲ್ಲ. ಇದು ನನ್ನ ಪಾಲಿಗೆ ವಿಶೇಷವಾದ ಚಿತ್ರ. ಇದರಲ್ಲಿ ನಿರ್ದೇಶಕರು ಮಲೆನಾಡಿನ ಒಂಟಿ ಹೆಣ್ಣಿನ ಕಥೆ ಹೇಳ ಹೊರಟಿದ್ದಾರೆ. ಇದರಲ್ಲಿ ಮಳೆ ಕೂಡ ಒಂದು ಪ್ರಮುಖ ಪಾತ್ರವಾಗಿ ತೋರಿಸಲಾಗಿದೆ. ನಾನು ಸಿನಿಮಾ ನೋಡಲು ಕಾತುರದಿಂದ ಕಾಯುತ್ತಿದ್ದೇನೆ’ ಎಂದರು.
‘ಮಳೆ, ಮೋಡ ಮತ್ತು ಶೈಲು’ ಚಿತ್ರಕ್ಕೆ ಸಾಗರ್ ಎಚ್.ಜಿ ಛಾಯಾಗ್ರಹಣ ಮತ್ತು ಅಕ್ಷಯ್ ಪಿ. ರಾವ್ ಅವರ ಸಂಕಲನವಿದೆ.





