ನಿರ್ದೇಶಕ ವೆಂಕಟ್ ಭಾರದ್ವಾಜ್ ಸಿನಿಮಾ ಮೇಲೆ ಸಿನಿಮಾ ಮಾಡುವುದಕ್ಕೆ ಜನಪ್ರಿಯರು. ಅವರ ‘ಹೇ ಪ್ರಭು’ ಎಂಬ ಚಿತ್ರವು ನವೆಂಬರ್ 07ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅದಕ್ಕೂ ಮೊದಲು ಅವರ ಇನ್ನೊಂದು ಚಿತ್ರ ಸದ್ದಿಲ್ಲದೆ ಪ್ರಾರಂಭವಾಗಿದೆ. ಅದೇ ‘ರಕ್ಕಿ’.
‘ರಕ್ಕಿ’ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ರೇಣುಕಾಂಬ ಥಿಯೇಟರ್ ನಲ್ಲಿ ನೆರವೇರಿತು. ಅಶ್ವಿನಿ ಪುನೀತ್ ರಾಜಕುಮಾರ್ ಅವರು ಚಿತ್ರದ ಮೊದಲ ಸನ್ನಿವೇಶಕ್ಕೆ ಆರಂಭಫಲಕ ತೋರಿಸುವ ಮೂಲಕ ಚಾಲನೆ ನೀಡಿ, ಚಿತ್ರ ಯಶಸ್ವಿಯಾಗಲೆಂದು ಹಾರೈಸಿದರು. ಈ ಚಿತ್ರವನ್ನು ಎಸ್.ಎನ್.ಆರ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಾಲಿಗ್ರಾಮ ಸುರೇಶ್ ನಿರ್ಮಿಸುತ್ತಿದ್ದು, ವೆಂಕಟ್ ಭಾರದ್ವಾಜ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿದ್ದಾರೆ. ವಿಶೇಷವೆಂದರೆ, ಈ ಚಿತ್ರದ ನಾಯಕನ ಹೆಸರೂ ರಕ್ಕಿ. ನಿರ್ಮಾಪಕರ ಮಗನಾಗಿರುವ ರಕ್ಕಿ, ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಆಶಿಕಾ ಸೋಮಶೇಖರ್ ಮತ್ತು ಪಲ್ಲವಿ ಮಂಜುನಾಥ್ ನಾಯಕಿಯಾಗಿ ನಟಿಸುತ್ತಿದ್ದಾರೆ.
ಈ ಚಿತ್ರದ ಕುರಿತು ಮಾತನಾಡುವ ವೆಂಕಟ್ ಭಾರದ್ವಾಜ್, ‘ನಿರ್ಮಾಪಕರಿಗೆ ನಾನು ಮೊದಲು ಎರಡು ಕಥೆ ಹೇಳಿದ್ದೆ. ಅವರು ಈ ಕಥೆಯನ್ನು ಅಶ್ವಿನಿ ಪುನೀತ್ ರಾಜಕುಮಾರ್ ಅವರ ಬಳಿ ಹೇಳಿ, ಅವರು ಒಪ್ಪುವ ಕಥೆಯನ್ನು ಸಿನಿಮಾ ಮಾಡೋಣ ಎಂದರು. ಅಶ್ವಿನಿ ಪುನೀತ್ ರಾಜಕುಮಾರ್ ಅವರು ಈ ಚಿತ್ರದ ಕಥೆ ಕೇಳಿ ಚೆನ್ನಾಗಿದೆ ಅಂತ ಹೇಳಿದರು. ಚಿತ್ರಕ್ಕೆ ಇಂದು ಅವರೇ ಚಾಲನೆ ನೀಡಿದ್ದು ಬಹಳ ಸಂತೋಷವಾಗಿದೆ. ಆಕ್ಷನ್ ಸಸ್ಪೆನ್ಸ್ ಥ್ರಿಲ್ಲರ್ ಕಥೆ ಇರುವ ಈ ಚಿತ್ರಕ್ಕೆ ಬೆಂಗಳೂರಿನಲ್ಲೇ ಹೆಚ್ಚಿನ ಚಿತ್ರೀಕರಣ ನಡೆಯಲಿದೆ’ ಎಂದರು.
ಇದನ್ನು ಓದಿ: ಸತ್ಯಪ್ರಕಾಶ್ ನಿರ್ದೇಶನದಲ್ಲಿ ಧೀರೇನ್ ಹೊಸ ಸಿನಿಮಾ
‘ರಕ್ಕಿ’ ಎಂದರೇನು? ಉತ್ತರಿಸಿದ ವೆಂಕಟ್, ‘’ರಕ್ಕಿ’ ಎಂದರೆ ಹಚ್ಚಿರುವ ಪಟಾಕಿ ಇದ್ದ ಹಾಗೆ. ಯಾವಾಗ ಸಿಡಿಯುತ್ತದೆ ಗೊತ್ತಿಲ್ಲ. ಚಿತ್ರದಲ್ಲಿ ನಾಯಕನ ಪಾತ್ರ ಕೂಡ ಹೀಗೆ ಇರುತ್ತದೆ. ಚಿತ್ರದಲ್ಲಿ ಬಿ. ಸುರೇಶ್, ಹರಿಣಿ ಶ್ರೀಕಾಂತ್, ಸುಂದರರಾಜ್, ರಮೇಶ್ ಪಂಡಿತ್, ಸಂಪತ್ ಮೈತ್ರೇಯ ಮುಂತಾದವರು ನಟಿಸುತ್ತಿದ್ದಾರೆ. ಲೋಕಿ ತವಸ್ಯ ಸಂಗೀತ ನಿರ್ದೇಶನ ಹಾಗೂ ಐಸ್ಸಾಕ್ಸ್ ಪ್ರಭಾಕರ್ ಛಾಯಾಗ್ರಹಣವಿರಲಿದೆ’ ಎಂದು ಮಾಹಿತಿ ನೀಡಿದರು.
ನಿರ್ಮಾಪಕ ಸಾಲಿಗ್ರಾಮ ಸುರೇಶ್ ಅವರ ತಂದೆ ರಾಜಶೇಖರ್, ಈ ಹಿಂದೆ ಡಾ. ರಾಜಕುಮಾರ್ ಅಭಿನಯದ ‘ಹೊಸ ಬೆಳಕು’ ಚಿತ್ರವನ್ನು ನಿರ್ಮಿಸಿದ್ದರಂತೆ. ‘ನಾನು ಮೂಲತಃ ಸಾಲಿಗ್ರಾಮದವನು. ಐಟಿ ಉದ್ಯೋಗಿ. 20 ವರ್ಷಗಳಿಂದ ಜರ್ಮನಿಯಲ್ಲೇ ವಾಸಿಸುತ್ತಿದ್ದೇನೆ. ಈಗ ನಾನು ‘ರಕ್ಕಿ’ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದೇನೆ. ನನ್ನ ಮಗನೇ ಚಿತ್ರಕ್ಕೆ ಹೀರೋ. ವೆಂಕಟ್ ಭಾರದ್ವಾಜ್ ಎರಡು ಕಥೆ ಸಿದ್ದ ಮಾಡಿಕೊಂಡಿದ್ದರು. ನಮ್ಮ ಕುಟುಂಬದ ಸ್ನೇಹಿತರಾದ ಅಶ್ವಿನಿ ಪುನೀತ್ ರಾಜಕುಮಾರ್ ಅವರ ಹತ್ತಿರ ಕಥೆ ಹೇಳಿ, ಅವರು ಒಪ್ಪುವ ಕಥೆಯನ್ನು ಚಿತ್ರ ಮಾಡೋಣ ಎಂದು ವೆಂಕಟ್ ಭಾರದ್ವಾಜ್ ಅವರಿಗೆ ಹೇಳಿದ್ದೆ. ಈ ಕಥೆಯನ್ನು ಅಶ್ವಿನಿ ಅವರು ಒಪ್ಪಿಕೊಂಡರು. ಈಗ ಚಿತ್ರೀಕರಣ ಆರಂಭ ಮಾಡುತ್ತಿದ್ದೇವೆ’ ಎಂದರು.
ಬಿ. ಸುರೇಶ ಈ ಚಿತ್ರದಲ್ಲಿ ಡ್ಯಾನಿ ಎಂಬ ಭೂಗತ ಲೋಕದ ದೊರೆಯಾಗಿ ಕಾಣಿಸಿಕೊಳ್ಳುತ್ತಿದ್ದಾರಂತೆ. ‘ಈ ಚಿತ್ರ ಹತ್ತರಲ್ಲಿ ಒಂದು ಆಗುವುದು ಬೇಡ. ಇದೇ ಒಂದು ಆಗಲಿ’ ಎಂದು ಹಾರೈಸಿದರು.





