ರಾಜ್ ಬಿ. ಶೆಟ್ಟಿ ಅಭಿನಯದ ಚಿತ್ರವೊಂದು ಬಿಡುಗಡೆಯಾಗದೆ ಒಂದು ವರ್ಷವೇ ಆಗಿದೆ. ಕಳೆದ ವರ್ಷದ ಜುಲೈನಲ್ಲಿ ರಾಜ್ ಅಭಿನಯದ ‘ರೂಪಾಂತರ’ ಚಿತ್ರ ಬಿಡುಗಡೆಯಾಗಿತ್ತು. ಈಗ ಒಂದು ವರ್ಷದ ನಂತರ ಅವರು ಇನ್ನೊಂದು ಹೊಸ ಚಿತ್ರದೊಂದಿಗೆ ಬಂದಿದ್ದಾರೆ. ಈ ಬಾರಿ ಅವರು ಈ ಚಿತ್ರದಲ್ಲಿ ನಟಿಸಿಲ್ಲ, ಬದಲಿಗೆ ಚಿತ್ರವನ್ನು ತಮ್ಮ ಲೈಟರ್ ಬುದ್ಧ ಫಿಲಂಸ್ ಸಂಸ್ಥೆಯಡಿ ನಿರ್ಮಿಸಿದ್ದಾರೆ. ಅದೇ ‘ಸು ಫ್ರಮ್ ಸೋ’.
ಹೆಸರು ಕೇಳುತ್ತಿದ್ದಂತೆಯೃ ಸು ಮತ್ತು ಸೋ ಎಂದರೇನು? ಎಂಬ ಪ್ರಶ್ನೆ ಬರಬಹುದು. ಇಲ್ಲಿ ಸು ಎಂದರೆ ಸುಲೋಚನಾ ಮತ್ತು ಸೋ ಎಂದರೆ ಸೋಮೇಶ್ವರ ಎಂದರ್ಥವಂತೆ. ಇದೊಂದು ಹಾರರ್ ಕಾಮಿಡಿ ಚಿತ್ರವಾಗಿದ್ದು, ಜೆ.ಪಿ. ತುಮಿನಾಡು ನಿರ್ದೇಶನದ ನಿರ್ದೇಶನ ಮಾಡಿದ್ದಾರೆ. ಈ ಚಿತ್ರವು ಜುಲೈ.25ರಂದು ಬಿಡುಗಡೆಯಾಗುತ್ತಿದ್ದು, ಅದಕ್ಕೂ ಮೊದಲು ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ.

ಈ ಚಿತ್ರದ ಕುರಿತು ಮಾತನಾಡುವ ರಾಜ್ ಶೆಟ್ಟಿ, ‘ರಂಗಭೂಮಿಯಲ್ಲಿ ಸಾಕಷ್ಟು ಹೆಸರು ಮಾಡಿರುವ ಗೆಳೆಯ ಜೆ.ಪಿ. ತುಮಿನಾಡು ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಚಿತ್ರವಿದು. ಆರು ವರ್ಷಗಳ ಹಿಂದೆಯೇ ಅವರು ಸಿದ್ದ ಮಾಡಿಕೊಂಡಿದ್ದ ಈ ಕಥೆ ಈಗ ಸಿನಿಮಾ ರೂಪ ಪಡೆದುಕೊಂಡಿದೆ. ನಾನು ಬಹಳ ಇಷ್ಟಪಡುವ ಕಾಮಿಡಿ ಜಾನರ್‍ನ ಚಿತ್ರವಿದು. ‘ಸು ಫ್ರಮ್ ಸೋ’ ಎಂದರೆ ಸುಲೋಚನ ಹಾಗೂ ಸೋಮೇಶ್ವರ ಎಂದರು. ಮೊದಲನೆಯದು ಪಾತ್ರದ ಹೆಸರಾದರೆ, ಎರಡನೆಯದು ಸ್ಥಳದ ಹೆಸರು. ಬಹುತೇಕ ಹೊಸತಂಡವೇ ಸೇರಿ ಮಾಡಿರುವ ಈ ಚಿತ್ರಕ್ಕೆ ಬೆಳ್ತಂಗಡಿ, ವೇಣೂರು, ಕಕ್ಯಪದವು ಸುತ್ತಮುತ್ತ 50 ದಿನಗಳ ಚಿತ್ರೀಕರಣ ನಡೆದಿದೆ’ ಎಂದರು.
ಸಿನಿಮಾ ನಿರ್ದೇಶಕನಾಗಬೇಕೆಂದು ಚಿತ್ರರಂಗಕ್ಕೆ ಬಂದ ನಾನು, ನಟನಾದೆ ಎಂದ ಜೆ.ಪಿ. ತುಮಿನಾಡು, ‘ಈಗ ಮೊದಲ ಚಿತ್ರವನ್ನು ನಿರ್ದೇಶನ ಮಾಡಿದ್ದೇನೆ. ಇದೊಂದು ಕಾಲ್ಪನಿಕ ಕಥೆ. ನೋಡುಗರನ್ನು ನಗೆಗಡಲಿನಲ್ಲಿ ತೇಲಿಸುವ ಕಥೆಯೂ ಹೌದು’ ಎಂದರು.
‘ಸು ಫ್ರಮ್ ಸೋ’ ಚಿತ್ರದಲ್ಲಿ ಜೆ.ಪಿ. ತುಮಿನಾಡು, ಶನೀಲ್ ಗೌತಮ್, ಪ್ರಕಾಶ್ ಕೆ ತುಮಿನಾಡು, ದೀಪಕ್ ರೈ ಪಣಜೆ, ಮೈಮ್ ರಾಮದಾಸ್, ಅರ್ಜುನ್ ಕಜೆ ಮುಂತಾದವರು ನಟಿಸಿದ್ದಾರೆ. ಚಂದ್ರಶೇಖರ್ ಅವರ ಛಾಯಾಗ್ರಹಣ, ಸುಮೇಧ್ ಕೆ ಅವರ ಸಂಗೀತ ಈ ಚಿತ್ರಕ್ಕಿದೆ.





