Mysore
16
overcast clouds

Social Media

ಗುರುವಾರ, 18 ಡಿಸೆಂಬರ್ 2025
Light
Dark

ನಾಗಶೇಖರ್‍ ನೀಡಿದ ಹೇಳಿಕೆಗಳಿಂದ ನೋವಾಗಿದೆ ಎಂದ ರಚಿತಾ ರಾಮ್‍

‘ಸಂಜು ವೆಡ್ಸ್ ಗೀತಾ 2’ ಚಿತ್ರದ ಪ್ರಚಾರಕ್ಕೆ ಬರದ ಕುರಿತು ರಚಿತಾ ರಾಮ್‍ ವಿರುದ್ಧ ‘ಸಂಜು ವೆಡ್ಸ್ ಗೀತಾ 2’ ನಿರ್ದೇಶಕ ನಾಗಶೇಖರ್‍, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದರು. ಅಷ್ಟೇ ಅಲ್ಲ, ರಚಿತಾ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದ್ದರು.

ಈ ಕುರಿತು ರಚಿತಾ ರಾಮ್‍ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಶುಕ್ರವಾರ ಸೋಷಿಯಲ್‍ ಮೀಡಿಯಾದಲ್ಲಿ ವೀಡಿಯೋ ಬಿಡುಗಡೆ ಮಾಡಿರುವ ರಚಿತಾ, ಮೊದಲ ಬಾರಿಗೆ ರಚಿತಾ ಮೌನ ಮುರಿದಿದ್ದಾರೆ. ಈ ವೀಡಿಯೋದಲ್ಲಿ ತಮ್ಮ ಮೇಲಿನ ಎಲ್ಲಾ ಆರೋಪಗಳಿಗೆ ಉತ್ತರ ನೀಡಿದ್ದಾರೆ.

ನಾಗಶೇಖರ್‍ ಆರೋಪಗಳಿಂದ ತಮಗೆ ತುಂಬಾ ನೋವಾಗಿದೆ ಎಂದಿರುವ ರಚಿತಾ, ಆ ಚಿತ್ರದ ನಿರ್ದೇಶಕರು, ನಿರ್ಮಾಪಕರು ಹಾಗೂ ಹೀರೋ ಇತ್ತೀಚೆಗೆ ಕೆಲವು ಸಂದರ್ಶನಗಳಲ್ಲಿ ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಅವರು ಬಳಸಿದ ಪದಗಳಿಂದ ನನಗೆ ತುಂಬ ನೋವಾಗಿದೆ. ಇದೇ ತಂಡದ ಜೊತೆ ನಾನು ಸುಮಾರು ಒಂದು ಮುಕ್ಕಾಲು ವರ್ಷ ಸಿನಿಮಾ ಮಾಡಿದ್ದೇನೆ. ಚಿತ್ರದ ಮೊದಲ ಬಿಡುಗಡೆಗೂ ಮೊದಲು ನಡೆದ ಪತ್ರಿಕಾಗೋಷ್ಠಿಗಳಲ್ಲಿ ನನ್ನ ಬದ್ಧತೆ ಮತ್ತು ನಟನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅದೇ ನನ್ನ ತಂಡ ಇಂದು ನನ್ನ ಬಗ್ಗೆ ತುಂಬ ಕೆಟ್ಟದಾಗಿ ಮಾತನಾಡುತ್ತಿದೆ. ಈ ಮಾತನ್ನು ಅಂದೇ ಆಡಬೇಕಿತ್ತು. ಅಂದು ಯಾಕೆ ಹೊಗಳಿದರು? ಈಗ ಯಾಕೆ ಈ ರೀತಿ ಮಾತನಾಡುತ್ತಿದ್ದಾರೆ?’ ಎಂದು ಅವರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಈ ಚಿತ್ರಕ್ಕೆ ಇವರೇ ನಾಯಕಿ, ನಿರ್ಮಾಪಕಿ, ನಿರ್ದೇಶಕಿ, ಸಾಹಸ ನಿರ್ದೇಶಕಿ …

‘ಸಂಜು ವೆಡ್ಸ್ ಗೀತಾ 2’ ಚಿತ್ರೀಕರಣ ಮಾಡುವಾಗ, ಇನ್ನೊಂದು ಚಿತ್ರದ ಪ್ರಚಾರಕ್ಕೆ ಹೋಗುವುದಕ್ಕೆ ಚಿತ್ರತಂಡದವರು ಬಿಟ್ಟಿರಲಿಲ್ಲ ಎಂದು ಆರೋಪಿಸಿರುವ ರಚಿತಾ, ‘’ಸಂಜು ವೆಡ್ಸ್ ಗೀತಾ 2’ ಚಿತ್ರೀಕರಣದಲ್ಲಿ ಭಾಗವಹಿಸುವ ಸಂದರ್ಭದಲ್ಲಿ ನನ್ನ ಇನ್ನೊಂದು ಚಿತ್ರ ಬಿಡುಗಡೆಗೆ ಸಿದ್ಧವಿತ್ತು. ಆ ಚಿತ್ರದ ಪ್ರಚಾರಕ್ಕೆ ಹೋಗುವುದಕ್ಕೆ ಈ ತಂಡದವರು ಬಿಟ್ಟಿರಲಿಲ್ಲ. ಒಂದು ದಿನ ಪ್ರಚಾರಕ್ಕೆ ಹೋಗಲು ನಾಗಶೇಖರ್‍ ಮತ್ತು ಕಿಟ್ಟಿ ಅವರಲ್ಲಿ ಕೇಳಿಕೊಂಡರೂ, ನನಗೆ ಪ್ರಮೋಷನ್ಗೆ ಹೋಗಲು ಬಿಡಲಿಲ್ಲ’ ಎಂದಿದ್ದಾರೆ.

‘ಸಂಜು ವೆಡ್ಸ್ ಗೀತಾ 2’ ಚಿತ್ರಕ್ಕೆ ಮಾಡಬೇಕಾಗಿದ್ದನ್ನು ಸಂಪೂರ್ಣವಾಗಿ ಮಾಡಿದ್ದೇನೆ ಎನ್ನುವ ರಚಿತಾ, ‘ನನ್ನ ಇನ್ನೊಂದು ಚಿತ್ರದ ಚಿತ್ರೀಕರಣ ನಡೆಯುತ್ತಿರುವುದರಿಂದ ಆದ್ಯತೆ ನೀಡಬೇಕಿದೆ. ಈ ವಿಷಯದಲ್ಲಿ ನಾನು ತಪ್ಪು ಮಾಡಿದ್ದೇನೆ ಅಂತ ನನಗೆ ಅನಿಸುತ್ತಿಲ್ಲ. ರೀ-ರಿಲೀಸ್ ಸಮಯದಲ್ಲಿ ಪ್ರಚಾರದಲ್ಲಿ ಭಾಗವಹಿಸಲು ಆಗದೇ ಇದ್ದುದರಿಂದ ಹೋಗೋದಕ್ಕೆ ಸಾಧ್ಯವಾಗದ ಕಾರಣ, ನಾನು ಇನ್‍ಸ್ಟಾಗ್ರಾಂನಲ್ಲಿ ಸ್ಟೋರಿ ಹಾಕಿದ್ದೆ. ರೀಲ್ಸ್ ಕೂಡ ಮಾಡಿದ್ದೆ’ ಎಂದಿದ್ದಾರೆ.

‘ಸಂಜು ವೆಡ್ಸ್ ಗೀತಾ 2’ ಚಿತ್ರತಂಡದವರ ಬಳಿ ಕ್ಷಮೆ ಕ್ಷಮೆ ಕೇಳುವುದಿಲ್ಲ ಎಂದಿರುವ ರಚಿತಾ, ‘ನಾನು ತಪ್ಪು ಮಾಡಿದ್ದರೆ, ಚಿಕ್ಕ ಮಕ್ಕಳಿಗೂ ಕಾಲಿಗೆ ಬೀಳುತ್ತೇನೆ. ಇಲ್ಲ ಅಂದರೆ ದೇವರು ಬಂದರೂ ಕ್ಷಮೆ ಕೇಳಲ್ಲ. ನನ್ನ ಅಭಿಮಾನಿಗಳಿಗೆ ನೋವಾಗಿದ್ದರೆ ನಾನು ಅವರಲ್ಲಿ ಮಾತ್ರ ಕ್ಷಮೆ ಕೇಳುತ್ತೇನೆ, ಬೇರೆಯವರಿಗೆ ಕೇಳುವುದಿಲ್ಲ’ ಎಂದು ಹೇಳಿದ್ದಾರೆ.

Tags:
error: Content is protected !!