ಕನ್ನಡ ಚಿತ್ರರಂಗ ಮತ್ತು ಇಲ್ಲಿಯ ಕೆಲವು ಬೆಳವಣಿಗೆಗಳ ಕುರಿತು ಕಲಾವಿದರು ಮತ್ತು ತಂತ್ರಜ್ಞರು ಆಗಾಗ ಬೇಸರ ವ್ಯಕ್ತಪಡಿಸುತ್ತಿರುತ್ತಾರೆ. ಇದೀಗ ನಟ-ನಿರ್ದೇಶಕ ಪ್ರಕಾಶ್ ಬೆಳವಾಡಿ, ಕನ್ನಡ ಚಿತ್ರರಂಗದ ಬಗ್ಗೆ ಬೇಸರದಿಂದ ಮಾತನಾಡಿದ್ದಾರೆ. ಬಹುಭಾಷೆಗಳಲ್ಲಿ ನಟಿಸುತ್ತಿರುವ ಅವರು, ಬೇರೆ ಭಾಷೆಗಳಿಗೆ ಹೋಲಿಸಿದರೆ ಕನ್ನಡ ಚಿತ್ರರಂಗ ಬಹಳ ಹಿಂದುಳಿದಿದೆ ಎಂದು ಹೇಳಿದ್ದಾರೆ.
ಇತ್ತೀಚೆಗೆ, Rapid Rashmi ನಡೆಸಿಕೊಡುವ ‘ಜಸ್ಟ್ ಕ್ಯೂರಿಯಸ್’ ಎಂಬ ಪಾಡ್‍ಕಾಸ್ಟ್ನಲ್ಲಿ ಭಾಗವಹಿಸಿ ಮಾತನಾಡಿರುವ ಅವರು, ಕನ್ನಡ ಚಿತ್ರರಂಗ ಹೇಗಿದೆ ಮತ್ತು ಎತ್ತ ಸಾಗುತ್ತಿದೆ ಎಂಬುದರ ಬಗ್ಗೆ ಉದಾಹರಣೆ ಸಮೇತ ಮಾತನಾಡಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ‘ಕನ್ನಡದಲ್ಲಿ ನಾನೊಂದು ದೊಡ್ಡ ನಿರ್ಮಾಣ ಸಂಸ್ಥೆಯೊಂದರ ಚಿತ್ರದಲ್ಲಿ ನಟಿಸಿದ್ದೆ. ನಿರ್ದೇಶಕರಿಗೆ ನನಗೆ ಅಷ್ಟೊಂದು ಸಂಭಾವನೆ ಕೊಡುವುದಕ್ಕೆ ಇಷ್ಟವಿರಲಿಲ್ಲ. ಸಂಭಾವನೆ ಕಡಿಮೆ ಮಾಡಿಕೊಳ್ಳುವುದಕ್ಕೆ ನಾನು ತಯಾರಿರಲಿಲ್ಲ. ನಾಲ್ಕು ಕಂತಿನಲ್ಲಿ ಸಂಭಾವನೆ ಕೊಡುವುದಾಗಿ ಹೇಳಿ ಕೊನೆಯ ಕಂತಿನ ಸಂಭಾವನೆ ಕೊಡಲಿಲ್ಲ. ಕೊನೆಯ ದಿನದ ಚಿತ್ರೀಕರಣ ಸಂದರ್ಭದಲ್ಲಿ ಯಾರೋ ನಾಲ್ವರನ್ನು ನನ್ನ ಕ್ಯಾರಾವಾನ್‍ಗೆ ಕಳುಹಿಸಿದರು. ಅವರು ಚೆನ್ನಾಗಿ ಮಾಂಸ ತಿಂದು, ಟಾಯ್ಲೆಟ್‍ಗೆ ಹೋಗಿ ಗಲೀಜು ಮಾಡಿ ಬಂದರು. ಒಳಗೆ ಉಸಿರುಗಟ್ಟಿಸುವಂತಿತ್ತು. ನನಗೆ ಒಳಗಡೆ ಕೂರುವುದಕ್ಕೆ ಸಾಧ್ಯವಾಗಲಿಲ್ಲ. ಕೊನೆಗೆ ಹೊರಗೆ ಹೋಗಿ ಬಿಸಿಲಿನಲ್ಲಿ ಕುಳಿತುಕೊಳ್ಳುವ ಪರಿಸ್ಥಿತಿ ಬಂತು’ ಎಂದಿದ್ದಾರೆ.
ಆ ನಿರ್ಮಾಣ ಸಂಸ್ಥೆ ಯಾವದು ಎಂದು ಬಹಿರಂಗಪಡಿಸದ ಅವರು, ಆ ಸಂಸ್ಥೆಯವರನ್ನು ಕಂಡರೆ ತನಗೆ ಭಯ ಮತ್ತು ಇನ್ನೆಂದೂ ಅವರ ಚಿತ್ರಗಳಲ್ಲಿ ನಟಿಸುವುದಿಲ್ಲ ಎಂದು ಹೇಳಿದ್ದಾರೆ. ‘ಯಾರು, ಯಾವ ಸಂಸ್ಥೆ ಎಂಬ ಹೆಸರು ಬೇಡ. ಅವರ ಕಂಡರೆ ನನಗೆ ಭಯ. ಮತ್ತೊಮ್ಮೆ ಅವಕಾಶ ಕೊಡುತ್ತಾರೋ, ಇಲ್ಲವೋ ಎಂಬ ಭಯವಲ್ಲ. ಅವಕಾಶ ಕೊಟ್ಟರೂ, ನಾನು ಅವರ ಸಂಸ್ಥೆಯ ಚಿತ್ರಗಳಲ್ಲಿ ಇನ್ನು ಮುಂದೆ ನಟಿಸುವುದಿಲ್ಲ. ದಿನಕ್ಕೆ 10 ಲಕ್ಷ ರೂ. ಸಂಭಾವನೆ ಕೊಟ್ಟರೂ ನನಗೆ ಅವರ ಚಿತ್ರ ಬೇಡ’ ಎಂದಿದ್ದಾರೆ.
ಇದು ಅತಿರೇಕದ ವರ್ತನೆ, ಎಲ್ಲರೂ ಆ ರೀತಿ ಇರುವುದಿಲ್ಲ ಎಂದಿರುವ ಪ್ರಕಾಶ್ ಬೆಳವಾಡಿ, ‘ಇಲ್ಲಿ ಬಹಳಷ್ಟು ಜನರಿಗೆ ಹೇಗೆ ನಡೆದುಕೊಳ್ಳಬೇಕು ಎಂಬುದೇ ಗೊತ್ತಿಲ್ಲ. ಕನ್ನಡ ಚಿತ್ರರಂಗದಲ್ಲಿ ಕಾಂಟ್ರಾಕ್ಟ್ (ಕರಾರು) ಅನ್ನುವುದೇ ಇಲ್ಲ. ಬೇರೆ ಎಲ್ಲಾ ಚಿತ್ರರಂಗಗಳಲ್ಲೂ ಇದೆ. ಕನ್ನಡ ಚಿತ್ರರಂಗದಲ್ಲಿ ಮಾತ್ರ ಕಾಂಟ್ರಾಕ್ಟ್ ಎಂಬುದಿಲ್ಲ. ನಾವು ಬಹಳ ಹಿಂದುಳಿದಿದ್ದೇವೆ. ಇದೊಂದು ಅನಾಗರೀಕ ಚಿತ್ರರಂಗ’ ಎಂದು ಬೇಸರವನ್ನು ಹೊರಹಾಕಿದ್ದಾರೆ.





