ನಾಗಭೂಷಣ್ ಅಭಿನಯದ ‘ವಿದ್ಯಾಪತಿ’ ಚಿತ್ರವು ಕಳೆದ ವರ್ಷದ ಕೊನೆಯಲ್ಲಿ ಬಿಡುಗಡೆ ಆಗುತ್ತದೆ ಎಂಬ ಸುದ್ದಿ ಇತ್ತಾದರೂ, ಚಿತ್ರತಂಡದವರು ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿರಲಿಲ್ಲ. ಇದೀಗ ಚಿತ್ರದ ಬಿಡುಗಡೆಯ ದಿನಾಂಕ ಕೊನೆಗೂ ಘೋಷಣೆಯಾಗಿದೆ.
‘ವಿದ್ಯಾಪತಿ’ ಚಿತ್ರವು ಏಪ್ರಿಲ್ 10, 2025ರಂದು ಬಿಡುಗಡೆಯಾಗುತ್ತಿದೆ. ಅದೇ ದಿನ ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರವು ಬಿಡುಗಡೆಯಾಬೇಕಿತ್ತು. ಆದರೆ, ಚಿತ್ರದ ಚಿತ್ರೀಕರಣವೇ ಇನ್ನೂ ಮುಗಿಯದಿರುವುದರಿಂದ ಚಿತ್ರ ಬಿಡುಗಡೆಯಾಗುವುದು ಅನುಮಾನವಾಗಿದೆ. ಹೀಗಿರುವಾಗಲೇ, ಅದೇ ದಿನದಂದು ‘ವಿದ್ಯಾಪತಿ’ ಚಿತ್ರದ ಬಿಡುಗಡೆ ಘೋಷಣೆಯಾಗಿದೆ. ದೊಡ್ಡ ಚಿತ್ರವೊಂದು ಬಿಡುಗಡೆಯಾಗುತ್ತಿರುವ ಭಯದಲ್ಲಿ, ಆ ದಿನ ಚಿತ್ರ ಬಿಡುಗಡೆ ಮಾಡುವುದಕ್ಕೆ ಯಾರೂ ಮುಂದೆ ಬಂದಿರಲಿಲ್ಲ. ಯಾವಾಗ ‘ಟಾಕ್ಸಿಕ್’ ಬರುವುದು ಅನುಮಾನವಾಗಿದೆಯೋ, ಆ ಅವಕಾಶವನ್ನು ‘ವಿದ್ಯಾಪತಿ’ ತಂಡದವರು ಬಳಸಿಕೊಳ್ಳುವುದಕ್ಕೆ ಮುಂದಾಗಿದ್ದಾರೆ.
ಡಾಲಿ ಪಿಕ್ಚರ್ಸ್ ಸಂಸ್ಥೆಯಡಿ ‘ಟಗರು ಪಲ್ಯ’ ಚಿತ್ರದ ನಂತರ ಧನಂಜಯ್, ನಾಗಭೂಷಣ್ ಅಭಿನಯದಲ್ಲಿ ‘ವಿದ್ಯಾಪತಿ’ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ‘ವಿದ್ಯಾಪತಿ’, ಡಾಲಿ ಪಿಕ್ಚರ್ಸ್‍ನ ನಾಲ್ಕನೇ ಚಿತ್ರ. ಕೆಲವು ವರ್ಷಗಳ ಹಿಂದೆ ಅಮೇಜಾನ್ ಪ್ರೈಮ್‍ನಲ್ಲಿ ಬಿಡುಗಡೆಯಾದ ‘ಇಕ್ಕಟ್’ ಚಿತ್ರವನ್ನು ನಿರ್ದೇಶಿಸಿದ್ದ ಇಶಾಂ ಮತ್ತು ಹಸೀಂ ಖಾನ್, ‘ವಿದ್ಯಾಪತಿ’ ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ ಕಥೆ ಬರೆದು, ಸಂಕಲನದ ಜವಾಬ್ದಾರಿಯನ್ನು ತಾವೇ ನಿಭಾಯಿಸಿದ್ದಾರೆ.
‘ವಿದ್ಯಾಪತಿ’ ಒಂದು ಕಾಮಿಡಿ ಚಿತ್ರವಾಗಿದ್ದು, ಇದರಲ್ಲಿ ನಾಗಭೂಷಣ್, ಕರಾಟೆ ಪಟುವಾಗಿ ನಟಿಸುತ್ತಿದ್ದಾರೆ. ಇನ್ನು, ಕರಾಟೆ ಮಾಸ್ಟರ್ ಆಗಿ ರಂಗಾಯಣ ರಘು ಅಭಿನಯಿಸಿದ್ದಾರೆ. ನಾಯಕಿಯಾಗಿ ‘ಉಪಾಧ್ಯಕ್ಷ’ ಖ್ಯಾತಿಯ ಮಲೈಕಾ ಟಿ ವಸುಪಾಲ್, ನಾಗಭೂಷಣ್‍ಗೆ ಜೋಡಿಯಾಗಿದ್ದಾರೆ. ಲವಿತ್ ಛಾಯಾಗ್ರಹಣ, ಡಾಸ್ಮೋಡ್ ಸಂಗೀತ ನಿರ್ದೇಶನ, ಮುರುಳಿ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.
ಈಗಾಗಲೇ ‘ವಿದ್ಯಾಪತಿ ಚಿತ್ರದ ‘ಅಯ್ಯೋ ವಿಧಿಯೇ …’ ಹಾಡು ಬಿಡುಗಡೆಯಾಗಿದ್ದು, ಸಾಕಷ್ಟು ಜನಪ್ರಿಯವಾಗಿದೆ. ಸದ್ಯದಲ್ಲೇ ಚಿತ್ರದ ಹಾಡುಗಳು ಮತ್ತು ಟೀಸರ್ ಬಿಡುಗಡೆಯಾಗಲಿದೆ.