ಪ್ರೇಮ್ ಇಂದು (ಏಪ್ರಿಲ್ 18) ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಮಧ್ಯೆ, ಅವರು ಸದ್ದಿಲ್ಲದೆ ಒಂದು ಹೊಸ ಚಿತ್ರವೊಂದನ್ನು ಒಪ್ಪಿಕೊಂಡಿದ್ದು, ಅದರಲ್ಲಿ ವಿಶೇಷವಾದ ಪಾತ್ರವೊಂದರಲ್ಲಿ ನಟಿಸುವುದಕ್ಕೆ ಸಜ್ಜಾಗಿದ್ದಾರೆ.
ಉಪೇಂದ್ರ ಅಣ್ಣನ ಮಗ ನಿರಂಜನ್ ಸುಧೀಂದ್ರ ಅಭಿನಯದಲ್ಲಿ ‘ಸ್ಪಾರ್ಕ್’ ಎಂಬ ಹೊಸ ಚಿತ್ರ ಕೆಲವು ತಿಂಗಳುಗಳ ಹಿಂದೆ ಸೆಟ್ಟೇರಿದ್ದು ನೆನಪಿರಬೇಕಲ್ಲಾ? ಆ ಚಿತ್ರದಲ್ಲಿ ಪ್ರೇಮ್ ಸಹ ಒಂದು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಬಂದಿದೆ.
ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ‘ಸ್ಪಾರ್ಕ್’ ಚಿತ್ರವನ್ನು ಡಾ. ಗರಿಮಾ ಅವಿನಾಶ್ ವಸಿಷ್ಠ ನಿರ್ಮಿಸುತ್ತಿದ್ದಾರೆ. ಇದಕ್ಕೂ ಮುನ್ನ ‘ಜೇಮ್ಸ್’, ‘ಭರಾಟೆ’, ‘ಕನಕ’ ಸೇರಿದಂತೆ 15ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಮಹಾಂತೇಶ್, ಈ ಚಿತ್ರದ ಮೂಲಕ ಮೊದಲ ಬಾರಿಗೆ ನಿರ್ದೇಶಕರಾಗುತ್ತಿದ್ದಾರೆ. ಅಶ್ವಿನ್ ಕೆನಡಿ ಛಾಯಾಗ್ರಹಣ, ಸಚಿನ್ ಬಸ್ರೂರು ಸಂಗೀತ ಈ ಚಿತ್ರಕ್ಕಿದ್ದು, ಚಿತ್ರೀಕರಣ ಭರದಿಂದ ಸಾಗಿದೆ.
ಚಿತ್ರದಲ್ಲಿ ನಿರಂಜನ್ ಸುಧೀಂದ್ರ ಪತ್ರಕರ್ತನಾಗಿ ನಟಿಸುತ್ತಿದ್ದಾರೆ. ನಾಯಕಿಯಾಗಿ ರಚನಾ ಇಂದರ್ ಅಭಿನಯಿಸುತ್ತಿದ್ದಾರೆ. ಈಗ ಚಿತ್ರಕ್ಕೆ ಪ್ರೇಮ್ ಅವರ ಸೇರ್ಪಡೆಯಾಗಿದೆ. ಈ ಚಿತ್ರದಲ್ಲಿ ಪ್ರೇಮ್ ಪಾತ್ರವೇನು? ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಾ? ಎಂಬ ಪ್ರಶ್ನೆ ಬರಬಹುದು. ಪ್ರೇಮ್ ಈ ಚಿತ್ರದಲ್ಲಿ ಒಂದು ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ನಿರ್ದೇಶಕ ಮಹಾಂತೇಶ್ ಹಂದ್ರಾಳ್, ಪ್ರೇಮ್ ಅವರಿಗೆಂದೇ ವಿಶೇಷ ಪಾತ್ರವನ್ನು ಡಿಸೈನ್ ಮಾಡಿದ್ದಾರಂತೆ. ಹಿಂದೆಂದೂ ಕಾಣದ ಲುಕ್‍ನಲ್ಲಿ ಪ್ರೇಮ್ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಇದಲ್ಲದೆ, ಕಳೆದ ವರ್ಷ ಪ್ರೇಮ್ ಹುಟ್ಟುಹಬ್ಬದ ಸಂದರ್ಭದಲ್ಲಿ ಹೊಸ ಚಿತ್ರದ ಮುಹೂರ್ತವಾಗಿತ್ತು. ಈ ಚಿತ್ರದಲ್ಲಿ ಅವರು ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಅವರಿಗೆ ನಾಯಕಿಯಾಗಿ ‘ಕೃಷ್ಣಂ ಪ್ರಣಯ ಸಖಿ’ ಖ್ಯಾತಿಯ ಶರಣ್ಯ ಶೆಟ್ಟಿ ನಟಿಸುತ್ತಿದ್ದಾರೆ.





