ಈ ವರ್ಷದ ಆರಂಭದಲ್ಲಿ ಬಿಡಗಡೆಯಾದ ‘ಸಂಜು ವೆಡ್ಸ್ ಗೀತಾ 2’ ಚಿತ್ರವು ಅಷ್ಟೇನೂ ಯಶಸ್ವಿಯಾಗಲಿಲ್ಲ. ಈ ಚಿತ್ರದ ನಂತರ ಶಿವರಾಜಕುಮಾರ್ ಅಭಿನಯದಲ್ಲಿ ಒಂದು ಚಿತ್ರ ಮತ್ತು ನಿರಂಜನ್ ಸುಧೀಂದ್ರ ಅಭಿನಯದಲ್ಲಿ ಒಂದು ಚಿತ್ರವನ್ನು ನಿರ್ದೇಶಿಸುವುದಾಗಿ ನಾಗಶೇಖರ್ ಘೋಷಿಸಿದ್ದರು. ಆದರೆ, ಈ ಎರಡೂ ಚಿತ್ರಗಳು ಪ್ರಾರಂಭವಾಗಲಿಲ್ಲ. ಬದಲಿಗೆ, ನಾಗಶೇಖರ್ ಸದ್ಯಕ್ಕೆ ನಿರ್ದೇಶನವನ್ನು ಪಕ್ಕಕ್ಕಿಟ್ಟು, ಇದೀಗ ಹೀರೋ ಆಗಿದ್ದಾರೆ.
ಹೌದು, ನಾಗಶೇಖರ್ ಬಹಳ ವರ್ಷಗಳ ನಂತರ ಒಂದು ಚಿತ್ರದಲ್ಲಿ ಹೀರೋ ಆಗಿ ನಟಿಸುತ್ತಿದ್ದಾರೆ. ಇದಕ್ಕೂ ಮೊದಲು ಅವರು ‘ಗೌರಿಪುತ್ರ’ ಎಂಬ ಚಿತ್ರದಲ್ಲೂ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಇತ್ತೀಚಿನ ವರ್ಷಗಳಲ್ಲಿ ನಿರ್ದೇಶನದಲ್ಲೇ ಹೆಚ್ಚಾಗಿ ತೊಡಗಿಸಿಕೊಂಡಿದ್ದ ನಾಗಶೇಖರ್, ಬಹಳ ದಿನಗಳ ನಂತರ ತೆರೆಮೇಲೆ ಬರುತ್ತಿದ್ದಾರೆ.
ನಾಗಶೇಖರ್ ಹೀರೋ ಆಗಿ ನಟಿಸುತ್ತಿರುವ ಚಿತ್ರದ ಹೆಸರೇ ವಿಭಿನ್ನವಾಗಿದೆ. ಚಿತ್ರದ ಹೆಸರು ‘ವಾರ್ತೆಗಳು – ಓದುತ್ತಿರುವವರು ಶಂಕರ್ ನಾಗ್’. ಶೀರ್ಷಿಕೆಯ ಮೂಲಕವೇ ಹೊಸ ಕುತೂಹಲ ಮೂಡಿಸಿರುವ ಈ ಚಿತ್ರವನ್ನು ಜಿಯಾ ಉಲ್ಲಾ ಖಾನ್ ನಿರ್ದೇಶನ ಮಾಡುತ್ತಿದ್ದಾರೆ. ಇತ್ತೀಚೆಗೆ ನವೆಂಬರ್ ೧೧ರಂದು ನಾಗಶೇಖರ್ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು. ಅದೇ ದಿನ ‘ವಾರ್ತೆಗಳು ಓದುತ್ತಿರುವವರು ಶಂಕರ್‌ನಾಗ್’ ಚಿತ್ರದ ಮುಹೂರ್ತ ನೆರವೇರಿದೆ. ರಾಜರಾಜೇಶ್ವರಿ ನಗರದ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಸರಳವಾಗಿ ನಡೆದ ಈ ಕಾರ್ಯಕ್ರಮದಲ್ಲಿ ನಾಗಶೇಖರ್ ಅವರ ತಾಯಿ ಚಿತ್ರದ ಪ್ರಥಮ ದೃಶ್ಯಕ್ಕೆ ಕ್ಲಾಪ್ ಮಾಡಿ ಶುಭ ಹಾರೈಸಿದರು.
‘ವಾರ್ತೆಗಳು – ಓದುತ್ತಿರುವವರು ಶಂಕರ್ ನಾಗ್’ ಚಿತ್ರವನ್ನು ಎ ರಾಮ್ ಚಿರು ಪ್ರೊಡಕ್ಷನ್ ಹೌಸ್ ಮೂಲಕ ರಾಮ್ ಚಿರು ನಿರ್ಮಿಸುತ್ತಿದ್ದಾರೆ. ಇಂದಿನಿಂದ ಚಿತ್ರೀಕರಣ ಪ್ರಾರಂಭವಾಗುತ್ತಿದೆ. ವಿಶೇಷವೆಂದರೆ, ಈ ಚಿತ್ರದಲ್ಲಿ ನಾಯಕನಾಗಿ ನಟಿಸುವುದರೊಂದಿಗೆ ನಾಗಶೇಖರ್ ಅವರೂ ಸಹ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದು ಜತೆಗೆ ಸಂಗೀತ ನಿರ್ದೇಶಕನಾಗಿಯೂ ಕೆಲಸ ಮಾಡುತ್ತಿದ್ದಾರೆ. ಉಳಿದ ಕಲಾವಿದರು ಮತ್ತು ತಾಂತ್ರಿಕ ವರ್ಗದವರ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬೀಳಬೇಕಿದೆ.





