ಕಳೆದ ಕೆಲವು ದಿನಗಳಿಂದ ಸುದ್ದಿ ಮಾಡುತ್ತಿರುವ ಚಿತ್ರಗಳ ಪೈಕಿ ‘ಎಲ್ಟು ಮುತ್ತಾ’ ಸಹ ಒಂದು. ಶೌರ್ಯ ಪ್ರತಾಪ್, ಪ್ರಿಯಾಂಕಾ ಮಳಲಿ ಮುಂತಾದವರು ಅಭಿನಯಿಸಿದ್ದ ಈ ಚಿತ್ರದ ಹಾಡುಗಳು ಬಿಡುಗುಡೆ ಸಮಾರಂಭ ಕೆಲವು ದಿನಗಳ ಹಿಂದೆ ನಡೆದಿತ್ತು. ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಬಿಡುಗಡೆ ದಿನಾಂಕ ಘೋಷಿಸಲಾಗುವುದು ಎಂದು ಹೇಳಲಾಗಿತ್ತು. ಅದರಂತೆ ಬಿಡುಗಡೆ ದಿನಾಂಕ ಘೋಷಣೆಯಾಗಿದ್ದು, ಚಿತ್ರವು ಆಗಸ್ಟ್.01ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
HIGH 5 ಸ್ಟುಡಿಯೋಸ್ ಲಾಂಛನದಲ್ಲಿ ಸತ್ಯ ಎಸ್.ಶ್ರೀನಿವಾಸನ್ ನಿರ್ಮಿಸಿರುವ, ರಾ. ಸೂರ್ಯ ನಿರ್ದೇಶನದ ‘ಎಲ್ಟು ಮುತ್ತಾ’ ಚಿತ್ರದ ಟ್ರೇಲರ್ ಇತ್ತೀಚೆಗೆ ವಿಕ್ಟರಿ ಸಿನಿಮಾಸ್‍ನಲ್ಲಿ ಅನಾವರಣವಾಯಿತು. ಹಿರಿಯ ನಿರ್ಮಾಪಕ ಎಸ್.ಎ. ಚಿನ್ನೇಗೌಡ ಟ್ರೇಲರ್ ಬಿಡುಗಡೆ ಮಾಡಿದರು. ನಟರಾದ ಕಿಶೋರ್ ಕುಮಾರ್, ಮನೋರಂಜನ್ ರವಿಚಂದ್ರನ್, ಪೊಲೀಸ್ ಅಧಿಕಾರಿ ರಾಜೇಶ್ ಮುಂತಾದವರು ಸಮಾರಂಭಕ್ಕೆ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.
ಇದೊಂದು ಮಾಸ್ ಚಿತ್ರವಾಗಿದ್ದು, ಕೊಡಗಿನ ಹಿನ್ನೆಲೆಯಲ್ಲಿ ಕಥೆ ನಡೆಯುತ್ತದೆ. ಆದರೆ, ಇದು ಬರೀ ಕೊಡಗಿನ ಕಥೆಯಲ್ಲ, ಕೊಡಗಿನ ಕಥೆಯನ್ನು ಇಡೀ ಕರ್ನಾಟಕಕ್ಕೆ ಹೇಳುವ ಪ್ರಯತ್ನ ಮಾಡುತ್ತಿದ್ದೇವೆ ಎನ್ನುತ್ತಾರೆ ನಿರ್ದೇಶಕ ರಾ.ಸೂರ್ಯ. ‘ನಾನು ಮೂಲತಃ ಕೊಡಗಿನವನು. ಅಲ್ಲಿ ನಡೆದ ಒಂದಿಷ್ಟು ಘಟನೆಗಳಿಂದ ಸ್ಫೂರ್ತಿ ಪಡೆದ ಕಥೆ ಬರೆದು ನಿರ್ದೇಶನ ಮಾಡಿದ್ದೇನೆ. ನಾನು ಈ ಜನರನ್ನು ನೋಡಿದ್ದೇನೆ. ಅದರಲ್ಲಿ ಕೆಲವರು ಬದುಕಿದ್ದಾರೆ. ಇನ್ನೂ ಕೆಲವರು ಬದುಕಿಲ್ಲ. ಅವರ ಜೀವನವನ್ನು ಹೇಳುವ ಪ್ರಯತ್ನವನ್ನು ಈ ಚಿತ್ರದ ಮೂಲಕ ಮಾಡಿದ್ದೇನೆ. ಸುಮಾರು 55 ದಿನಗಳ ಕಾಲ ಕೊಡಗಿನಲ್ಲಿ ಚಿತ್ರೀಕರಣ ಮಾಡಿದ್ದೇವೆ. ಒಂದು ಹಾಡನ್ನು ಕನಕಪುರದ ಬಳಿ ಚಿತ್ರೀಕರಿಸಲಾಗಿದೆ’ ಎಂದರು.
‘ಎಲ್ಟು ಮುತ್ತ’ ಚಿತ್ರದಲ್ಲಿ ರಾ. ಸೂರ್ಯ, ಶೌರ್ಯ ಪ್ರತಾಪ್, ಪ್ರಿಯಾಂಕ ಮಳಲಿ, ಯಮುನಾ ಶ್ರೀನಿಧಿ, ನವೀನ್ ಡಿ. ಪಡೀಲ್, ಕಾಕ್ರೋಚ್ ಸುಧಿ ಮುಂತಾದವರು ನಟಿಸಿರುವ ಈ ಚಿತ್ರಕ್ಕೆ ಕೇಶವ ಪ್ರಸನ್ನ ಸಂಗೀತವಿದೆ.





