ಕೆಲವು ವರ್ಷಗಳ ಹಿಂದೆ ಬಿಡುಗಡೆಯಾದ ‘ಟಕ್ಕರ್’ ಚಿತ್ರದ ನಂತರ, ದರ್ಶನ್ ಸಂಬಂಧಿ ಮನೋಜ್ ಅಭಿನಯದ ಯಾವೊಂದು ಚಿತ್ರವೂ ಬಿಡುಗಡೆಯಾಗಿರಲಿಲ್ಲ. ಒಂದೆರಡು ಚಿತ್ರಗಳಲ್ಲಿ ಅವರ ಹೆಸರು ಕೇಳಿಬಂದಿತ್ತಾದರೂ, ಯಾವ ಚಿತ್ರವೂ ಶುರುವಾಗಿರಲಿಲ್ಲ. ಈಗ ಮನೋಜ್ ಅಭಿನಯಸ ‘ಗಾರ್ಡನ್’ ಎಂಬ ಚಿತ್ರ ಸದ್ದಿಲ್ಲದೆ ಸೆಟ್ಟೇರಿದೆ.
‘ಗಾರ್ಡನ್’ ಚಿತ್ರಕ್ಕೆ ಆರ್ಯ ಮಹೇಶ್ ಕಥೆ-ಚಿತ್ರಕಥೆ ಬರೆದು ನಿರ್ದೇಶನದ ಈ ಚಿತ್ರವನ್ನು ಎಂ.ಆರ್. ಸಿನಿಮಾಸ್ ಬ್ಯಾನರ್ ಮೂಲಕ ಜಿ. ಮುನಿರಾಜು ನಿರ್ಮಿಸುತ್ತಿದ್ದಾರೆ. ಈ ಚಿತ್ರದ ಮುಹೂರ್ತ ಇತ್ತೀಚೆಗೆ ನಡೆದಿದ್ದು, ಚಿತ್ರದ ಮೊದಲ ದೃಶ್ಯಕ್ಕೆ ದಿನಕರ್ ತೂಕದೀಪ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.
ಇದನ್ನು ಓದಿ : ಕಿರುಚಿತ್ರ ‘ಅಮೃತಾಂಜನ್’ ಈಗ ಸಿನಿಮಾ ಆಯ್ತು …
ಇದು ಪೌರಕಾರ್ಮಿಕರ ಬದುಕನ್ನು ಕಟ್ಟಿಕೊಡುವ ಒಂದು ಚಿತ್ರವಾಗಿದ್ದು, ಈ ಚಿತ್ರದ ಕುರಿತು ಮಾತನಾಡುವ ನಿರ್ದೇಶಕ ಆರ್ಯ ಮಹೇಶ್, ʻಈ ಸಲ ಕೂಡಾ ನಾನು ನೈಜ ಕಥಾವಸ್ತುವನ್ನು ಕೈಗೆತ್ತಿಕೊಂಡಿದ್ದೇನೆ. ಬೆಂಗಳೂರಿನ ಡಂಪಿಂಗ್ ಯಾರ್ಡ್ಗಳನ್ನು ʻಗಾರ್ಡನ್ʼ ಅಂತಾ ಕರೀತಾರೆ. ನಮ್ಮ ಚಿತ್ರದ ಬಹುತೇಕ ನಡೆಯೋದು ಕಸ ವಿಲೇವಾರಿ ವಿಚಾರದ ಸುತ್ತ. ಹೀಗಾಗಿ ಗಾರ್ಡನ್ ಎಂದು ಹೆಸರಿಟ್ಟಿದ್ದೇನೆ ಎಂದರು.
ಕೋವಿಡ್ ನಂತರ ಚಿತ್ರರಂಗ ಬದಲಾಗಿದೆ ಎಂದ ಮನೋಜ್, ‘ಜನ ಜಗತ್ತಿನ ಎಲ್ಲಾ ಭಾಷೆಯ ಸಿನಿಮಾಗಳನ್ನು ನೋಡುತ್ತಾರೆ. ಭಿನ್ನ ಕಥಾವಸ್ತುವನ್ನು ಮಾತ್ರ ಒಪ್ಪಿಕೊಳ್ಳುತ್ತಾರೆ. ಹೀಗಾಗಿ, ನಾವು ಯಾರಿಗೂ ಗೊತ್ತಿಲ್ಲದ ವಿವರಗಳನ್ನು, ವಿಶೇಷವಾಗಿ ಹೇಳಲೇಬೇಕಿದೆ. ‘ಗಾರ್ಡನ್’ ಮೂಲಕ ಬೆಂಗಳೂರಿನ ಹೇಳದ ಕಥೆಯನ್ನು ಹೇಳುವ ಪ್ರಯತ್ನ ಮಾಡಿದ್ದೇವೆ’ ಎಂದರು.
ಈ ಚಿತ್ರದಲ್ಲಿ ಮನೋಜ್‍ಗೆ ಅನು ಪ್ರೇಮಾ ಮತ್ತು ಸೋನಮ್ ರೈ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ಮುಂಜಾನೆ ಮಂಜು ಛಾಯಾಗ್ರಹಣವಿದ್ದು, ಅಕ್ಟೋಬರ್ ಮೊದಲ ವಾರದಿಂದ ಚಿತ್ರೀಕರಣ ಪ್ರಾರಂಭವಾಗಲಿದೆ.





