ಕೆಲವು ದಿನಗಳ ಹಿಂದಷ್ಟೇ ‘ನಿದ್ರಾದೇವಿ ನೆಕ್ಸ್ಟ್ ಡೋರ್’ ಚಿತ್ರದ ತಾಯಿ-ಮಗನ ಸೆಂಟಿಮೆಂಟ್ ಹಾಡು ಬಿಡುಗಡೆಯಾಗಿತ್ತು. ಇದೀಗ ವಿನಯ್ ರಾಜಕುಮಾರ್ ಅಭಿನಯದ ‘ಅಂದೊಂದಿತ್ತು ಕಾಲ’ ಚಿತ್ರವು ಇದೇ ಆಗಸ್ಟ್ 29ರಂದು ಬಿಡುಗಡೆಯಾಗುತ್ತಿದೆ. ಅದಕ್ಕೂ ಮುನ್ನ ಗಣೇಶ ಹಬ್ಬಕ್ಕೂ ಮುನ್ನಾ ದಿನ ಚಿತ್ರದ ‘ಮಹಾರಾಜ ಆಗೆಂದು …’ ಎಂಬ ತಾಯಿ ಸೆಂಟಿಮೆಂಟ್ ಹಾಡನ್ನು ಬಿಡುಗಡೆ ಮಾಡಲಾಯಿತು.
‘ಕೆಜಿಎಫ್’ ಖ್ಯಾತಿಯ ಕಿನ್ನಾಳ್ ರಾಜ್ ಸಾಹಿತ್ಯ ಬರೆದಿರುವ ಈ ಹಾಡನ್ನು ಸುನಿಲ್ ಕಶ್ಯಪ್ ಹಾಡಿದ್ದಾರೆ. ಹಾಡಿನಲ್ಲಿ ಅರುಣಾ ಬಾಲರಾಜ್ ಮತ್ತು ವಿನಯ್ ರಾಜಕುಮಾರ್ ಕಾಣಿಸಿಕೊಂಡಿದ್ದಾರೆ.
ವಿನಯ್ ರಾಜಕುಮಾರ್‍ಗೆ ಈ ಚಿತ್ರ ಬಹಳ ವಿಶೇಷವಂತೆ. ‘ಇದೊಂದು ನಿರ್ದೇಶಕನ ಲೈಫ್ ಜರ್ನಿ. ಕೀರ್ತಿ ಅವರು ತಮ್ಮ ಜೀವನದಲ್ಲಿ ನಡೆದ ಘಟನೆಗಳನ್ನು ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಅದರಲ್ಲೂ ಅವರ ಸಿನಿಮಾ ಬದುಕಿನ ಸುತ್ತಮುತ್ತ ನಡೆದದ್ದನ್ನು ಕಥೆಯಾಗಿಸಿಕೊಂಡು ಬಹಳ ಸಹಜವಾಗಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ನನ್ನ ಪಾತ್ರಕ್ಕೆ ಮೂರು ಶೇಡ್‍ಗಳಿವೆ. ಚಿತ್ರದಲ್ಲಿ ನನ್ನ ಅಮ್ಮನಾಗಿ ಅರುಣಾ ಬಾಲರಾಜ್ ಕಾಣಿಸಿಕೊಂಡಿದ್ದಾರೆ. ಅವರ ಜೊತೆ ನನ್ನ ಮೂರನೇ ಚಿತ್ರ ಇದು. ಎಲ್ಲಾ ವರ್ಗದವರಿಗೂ ಇಷ್ಟವಾಗುವಂತ ಕಥೆ ಒಳಗೊಂಡಿದೆ’ ಎಂದರು.
ತಾಯಿ ಪಾತ್ರ ಮಾಡಿರುವ ಅರುಣಾ ಬಾಲರಾಜ್ ಮಾತನಾಡಿ, ‘ಮಗನನ್ನು ಆಶೀರ್ವಾದ ಮಾಡಿ ಕಳಿಸಿದ ಮೇಲೆ ಹೇಗೆ ಹೆಸರು ಮಾಡುತ್ತಾನೆ ಎಂಬುದರ ಮೇಲೆ ಕಥೆ ಇದೆ. ನಾನು ಡಬ್ಬಿಂಗ್ ಮಾಡುವ ಸಮಯದಲ್ಲಿ ಕೆಲವು ದೃಶ್ಯಗಳನ್ನು ನೋಡಿದ್ದೇನೆ. ಚಿತ್ರ ಬಹಳ ಚೆನ್ನಾಗಿ ಮೂಡಿಬಂದಿದೆ. ಅದರಲ್ಲೂ ಅಭಿಷೇಕ್ ಕಾಸರಗೋಡು ಅವರ ಛಾಯಾಗ್ರಹಣ ಅದ್ಭುತವಾಗಿ ಮೂಡಿ ಬಂದಿದೆ. ತಾಯಿ ತಾನು ಕಷ್ಟ ಪಟ್ಟರು ಮಕ್ಕಳಿಗೆ ಸಾಧನೆ ಮಾಡಲು ಕಳಿಸಲು ಏನೆಲ್ಲಾ ಶ್ರಮ ಪಡುತ್ತಾಳೆ ಎಂಬುದನ್ನು ಈ ಚಿತ್ರದಲ್ಲಿ ನೋಡಬಹುದು’ ಎಂದರು.
‘ಅಂದೊಂದಿತ್ತು ಕಾಲ’ ಚಿತ್ರದಲ್ಲಿ ವಿನಯ್ ರಾಜ್‍ಕುಮಾರ್ ಮತ್ತು ಅದಿತಿ ಜೊತೆಗೆ ನಿಶಾ ರವಿಕೃಷ್ಣನ್, ಜಗ್ಗಪ್ಪ, ಅರುಣಾ ಬಾಲರಾಜ್ ಮುಂತಾದವರು ನಟಿಸಿದ್ದು, ರವಿಚಂದ್ರನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬೆಂಗಳೂರು, ತೀರ್ಥಹಳ್ಳಿ ಮುಂತಾದ ಕಡೆ ಚಿತ್ರದ ಚಿತ್ರೀಕರಣವಾಗಿದೆ. ಈ ಚಿತ್ರವನ್ನು ಭುವನ್ ಸಿನಿಮಾಸ್ ಅಡಿ ಸುರೇಶ್ ನಿರ್ಮಿಸಿದ್ದಾರೆ. ಚಿತ್ರಕ್ಕೆ ಅಭಿಷೇಕ್ ಕಾಸರಗೋಡು ಛಾಯಾಗ್ರಹಣವಿದೆ.





