ಹಲವು ಆರೋಪಗಳನ್ನು ಹೊತ್ತಿರುವ ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಮಡೆನೂರು ಮನು ಆರೋಪ ಮುಕ್ತನಾಗುವವರೆಗೂ ಅವರಿಗೆ ಸಹಕಾರ ನೀಡಬಾರದೆಂದು ಕನ್ನಡ ಚಿತ್ರರಂಗ ತೀರ್ಮಾನಿಸಿದೆ. ಅಲ್ಲಿಗೆ, ಮನು ಸದ್ಯಕ್ಕೆ ಕನ್ನಡ ಚಿತ್ರರಂಗದ ಮತ್ತು ಕಿರುತೆರೆಯ ಯಾವುದೇ ಚಟುವಟಿಕೆಗಳಲ್ಲೂ ಭಾಗವಹಿಸುವಂತಿಲ್ಲ.
ಇತ್ತೀಚೆಗೆ, ನಟರಾದ ಶಿವರಾಜಕುಮಾರ್, ದರ್ಶನ್ ಮತ್ತು ಧ್ರುವ ಸರ್ಜಾ ವಿರುದ್ಧ ಮನು ಅವಹೇಳನಕಾರಿ ಟೀಕೆಗಳನ್ನು ಮಾಡಿದ್ದಾರೆ ಎಂದು ಹೇಳಲಾಗಿತ್ತು. ಮನು ಅವರದ್ದು ಎನ್ನಲಾದ ಆಡಿಯೋ ಕ್ಲಿಪ್‍ವೊಂದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ. ಈ ಆಡಿಯೋದಲ್ಲಿ ಮನು, ‘ಶಿವರಾಜಕುಮಾರ್ ಇನ್ನೊಂದಾರು ವರ್ಷಗಳಲ್ಲಿ ಸತ್ತೋಗ್ತಾನೆ. ಧ್ರುವ ಸರ್ಜಾ ಇನ್ನೊಂದು ಎಂಟು ವರ್ಷ ಇರಬಹುದು. ದರ್ಶನ್ ಸತ್ತೋದ. ದರ್ಶನ್‍ಗೆ ಇನ್ನೊಂದು ಆರು ವರ್ಷ ಕ್ರೇಜ್ ಇರುತ್ತದೆ. ಆದರೆ, ಸಿನಿಮಾ ಮಾಡಲ್ಲ. ಈ ಮೂರು ಜನರ ಮಧ್ಯೆ ಕಾಂಪಿಟೇಷನ್ ಕೊಡೋಕೆ ಬಂದಿರೋ ಗಂಡುಗಲಿ ರೀ ನಾನು’ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಯಾವಾಗ ಈ ಆಡಿಯೋ ವೈರಲ್ ಆಯಿತೋ, ಆಗ ದರ್ಶನ್, ಶಿವರಾಜಕುಮಾರ್ ಮತ್ತು ಧ್ರುವ ಸರ್ಜಾ ಅಭಿಮಾನಿಗಳು, ತಮ್ಮ ಮೆಚ್ಚಿನ ನಟರ ಬಗ್ಗೆ ಮನು ಹೀಗೆ ಮಾತನಾಡಿದ್ದರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಮನು ಅವರನ್ನು ಚಿತ್ರರಂಗದಿಂದ ಬ್ಯಾನ್ ಆಗ್ರಹಿಸಿದ್ದರು.
ಈ ಹಿನ್ನೆಲೆಯಲ್ಲಿ ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಚಿತ್ರರಂಗದ ಎಲ್ಲಾ ವಲಯಗಳ ಸಭೆ ನಡೆದಿದ್ದು, ಈ ಸಭೆಯಲ್ಲಿ ಮನು ಅವರು ಎಲ್ಲಾ ಪ್ರಕರಣಗಳಿಂದಲೂ ಮುಕ್ತರಾಗುವವರೆಗೂ ಅವರಿಗೆ ಸಹಕಾರ ನೀಡಬಾರದು ಎಂದು ತೀರ್ಮಾನ ತೆಗೆದುಕೊಳ್ಳಲಾಗಿದೆ.
ಸಭೆಯ ನಂತರ ಈ ಕುರಿತು ಮಾತನಾಡಿರುವ ವಾಣಿಜ್ಯ ಮಂಡಳಿಯ ಅಧ್ಯಕ್ಷ ನರಸಿಂಹಲು, ‘ಮನು ಅವರದ್ದು ದುರಹಂಕಾರದ ವರ್ತನೆಯಾಗಿದ್ದು, ಅವರಿಗೆ ಯಾವುದೇ ರೀತಿಯ ಸಹಕಾರ ಕೊಡಬಾರದು ಎಂದು ಸಭೆಯಲ್ಲಿ ತೀರ್ಮಾನವಾಗಿದೆ. ಮೊದಲು ಈ ಆಡಿಯೋ ಕುರಿತು ವಾಣಿಜ್ಯ ಮಂಡಳಿ ವತಿಯಿಂದ ಕಮಿಷನರ್ ಅವರಿಗೆ ದೂರು ಕೊಡುತ್ತಿದ್ದೇವೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಆಡಿಯೋದಲ್ಲಿರುವ ಧ್ವನಿ ಮನು ಅವರದ್ದೇನಾ? ಎಂಬುದನ್ನು ಪೊಲೀಸರು ತನಿಖೆ ಮಾಡಬೇಕು. ಈಗಾಗಲೇ ಅವರ ಮೇಲೆ ಹಲವು ಪ್ರಕರಣಗಳಿವೆ. ಎಲ್ಲಾ ಪ್ರಕರಣಗಳಿಂದ ಮುಕ್ತವಾಗುವವರೆಗೂ ಸಹಕಾರ ಕೊಡಬಾರದು ಎಂದು ತೀರ್ಮಾನವಾಗಿದೆ. ಅವರು ಚಿತ್ರರಂಗ, ಕಿರುತೆರೆ ಸೇರಿದಂತೆ ಯಾವುದೇ ರೀತಿಯ ಚಟವಟಿಕೆಗಳಲ್ಲೂ ಭಾಗವಹಿಸುವ ಹಾಗಿಲ್ಲ’ ಎಂದರು.





