‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ಚಿತ್ರೀಕರಣ ಶುರುವಾಗಿ ಎರಡು ದಿನಗಳ ನಂತರ, ನಾನು ಮತ್ತು ನಿರ್ದೇಶಕರು ಚರ್ಚೆ ಮಾಡುತ್ತಾ ಕುಳಿತಿದ್ದೆವು. ಆ ಸಂದರ್ಭದಲ್ಲಿ ಶ್ರೀನಿವಾಸರಾಜು, ಈ ಚಿತ್ರ ಇಷ್ಟು ಹಣ ಮಾಡಬೇಕು ಎಂದು ಆಸೆಪಡುತ್ತೀನಿ ಎಂದು ಒಂದು ಮೊತ್ತ ಹೇಳಿದರು. ನಿಮ್ಮ ಬೇರೆ ಸಿನಿಮಾಗಳಿಗಿಂತ ಈ ಚಿತ್ರ ಒಂದೊಳ್ಳೆಯ ಗಳಿಕೆ ಮಾಡುತ್ತದೆ ಎಂದಿದ್ದರು. ಅದನ್ನು ಮಾಡಿ ತೋರಿಸಿದ್ದಾರೆ. ಅವರು ಹೇಳಿದ ಮೊತ್ತ 25 ದಿನಕ್ಕೆ ಪೂರ್ತಿ ಆಗಿಲ್ಲ. ಅದರ ಹತ್ತಿರ ಬಂದಿದ್ದೇವೆ. 50 ದಿನಕ್ಕೆ ರೀಚ್ ಆಗುತ್ತೇವೆ …’
ಹಾಗಂತ ಹೇಳಿದ್ದು ಗಣೇಶ್. ‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ಗಳಿಕೆ ಎಷ್ಟಾಗಿದೆ ಎಂಬ ಪ್ರಶ್ನೆಯನ್ನು ಅವರಿಗೆ ಕೆಲವು ದಿನಗಳ ಹಿಂದೆ ಚಿತ್ರದ ಸಂತೋಷ ಕೂಟದ ಕೇಳಿದ ಸಂದರ್ಭದಲ್ಲಿ ಚಿತ್ರ 25 ದಿನಗಳನ್ನು ಪೂರೈಸುವುದಾಗಿ ಹೇಳಿದ್ದರು. ಈಗ ಚಿತ್ರ 25 ದಿನ ಓಡಿದೆ. ಆದರೆ, ಗಣೇಶ್ ಈಗ ಚಿತ್ರ ಎಷ್ಟು ಗಳಿಕೆ ಮಾಡಿದೆ ಎಂಬ ಗುಟ್ಟು ಬಿಟ್ಟುಕೊಟ್ಟಿಲ್ಲ.
ಗಣೇಶ್ ಅಭಿನಯದ ‘ಕೃಷ್ಣಂ ಪ್ರಣಯ ಸಖಿ’ ಚಿತ್ರವು ಯಶಸ್ವಿಯಾಗಿ 25 ದಿನಗಳನ್ನು ಪೂರೈಸಿದೆ. ಈ ಸಂತೋಷವನ್ನು ಹಂಚಿಕೊಳ್ಳುವುದಕ್ಕೆ ಇಡೀ ಚಿತ್ರತಂಡ ಪ್ರಸನ್ನ ಚಿತ್ರಮಂದಿರದಲ್ಲಿ ಸೇರಿತ್ತು. ಚಿತ್ರಕ್ಕೆ ದುಡಿದ ಕಲಾವಿದರು ಮತ್ತು ತಂತ್ರಜ್ಞರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಗಣೇಶ್, ‘ನಿರ್ದೇಶಕರಿದ್ದರೆ ನಾವು. ಅವರಿಗೆ ದೊಡ್ಡ ಕನಸಿದ್ದರೆ ಒಂದು ಚಿತ್ರ ಆಗೋಕೆ ಸಾಧ್ಯ. ಕಥೆ ಎನ್ನುವುದು ಅವರ ಕಲ್ಪನೆ. ಅವರು ಬೀಜ ಹಾಕಿ, ಗಿಡ ಮಾಡಿ, ಅದು ಮರವಾಗಿ ಬೆಳೆದು, ಅದನ್ನು ನಮ್ಮ ಹತ್ತಿರ ಬಿಡುತ್ತಾರೆ. ಆ ಮರದ ಕೆಳಗೆ ನಾವಿರುತ್ತೇವೆ ಅಷ್ಟೇ. ಅವರು ಕಷ್ಟಪಟ್ಟು ಕಥೆ ಮಾಡಿರುತ್ತಾರೆ. ನಾವು ಅಭಿನಯಿಸುತ್ತೇವೆ ಅಷ್ಟೇ. ಈ ಚಿತ್ರದ ಗೆಲುವಿನಲ್ಲಿ ನಿರ್ದೇಶಕರಿಗೆ ಸಿಂಹಪಾಲು ಸಲ್ಲಬೇಕು. ಗೆಲುವು ಎಲ್ಲಾ ಕಲಾವಿದರು ಹಾಗೂ ತಂತ್ರಜ್ಞರಿಗೆ ಸಲ್ಲಬೇಕು’ ಎಂದರು.
ಈ ಸಮಾರಂಭಕ್ಕೆ ಅವರು ದುಬೈನಲ್ಲಿ ಖರೀದಿಸಿದ ಜಾಕೆಟ್‍ವೊಂದನ್ನು ಅವರು ತೊಟ್ಟು ಬಂದಿದ್ದರು. ‘ಇತ್ತೀಚೆಗೆ ದುಬೈನಲ್ಲಿ ಚಿತ್ರ ಬಿಡುಗಡೆಯಾಯಿತು. ಆ ಸಂದರ್ಭದಲ್ಲಿ ನಾವೂ ಹಾಜರಿದ್ದೆವು. ಪ್ರದರ್ಶನ ಮುಗಿಸಿ ವಾಪಸ್ಸು ಬರುವಾಗ ನಾನು, ರಂಗಾಯಣ ರಘು ಮತ್ತು ಶ್ರೀನಿವಾಸರಾಜು ಮೂರೂ ಜನ ಶಾಪಿಂಗ್‍ಗೆ ಹೋಗಿದ್ದೆವು. ಈಗ ಹಾಕಿರುವ ಜಾಕೆಟ್ ನೋಡಿದ್ದು ಅಲ್ಲೇ. ಇದನ್ನು ತೋರಿಸಿ, ಈ ಜಾಕೆಟ್‍ನ ಚಿತ್ರ 25ನೇ ದಿನದ ಸಮಾರಂಭಕ್ಕೆ ಹಾಕಿಕೊಂಡು ಬರಬೇಕು ಎಂದು ರಘು ಸಾರ್ ಹೇಳಿದರು. ಇದರ ಮೇಲೆ ಜಿಎಫ್ ಅಂತ ಇದೆಯಲ್ಲಾ, ಹಾಗೆಂದರೆ ‘ಗೋಲ್ಡನ್ ಫ್ಯಾನ್ಸ್’ ಎಂದರು. ಅವರು ಗೆಲ್ಲಿಸಿದ್ದರಿಂದ ಚಿತ್ರ ಇಷ್ಟು ದೊಡ್ಡ ಯಶಸ್ಸಾಗಿದೆ ಎಂದರು ರಘು ಸಾರ್. ಅದಕ್ಕೆ ಈ ಜಾಕೆಟ್ ಹಾಕಿಕೊಂಡು ಬಂದೆ’ ಎಂದರು.
ಈ ಸಂದರ್ಭದಲ್ಲಿ ಗಣೇಶ್, ಶರಣ್ಯ ಶೆಟ್ಟಿ, ಶಶಿಕುಮಾರ್, ಗಿರಿ ಶಿವಣ್ಣ, ಹಿರಿಯ ನಟರಾದ ರಾಮಕೃಷ್ಣ ಮತ್ತು ಶ್ರೀನಿವಾಸಮೂರ್ತಿ, ಸಾಧು ಕೋಕಿಲ, ನಿರ್ದೇಶಕ ಶ್ರೀನಿವಾಸರಾಜು ಸೇರಿದಂತೆ ಹಲವರು ಹಾಜರಿದ್ದರು.